ರಚನೆ: ಶ್ರೀ ಮುಪ್ಪಿನ ಷಡಕ್ಷರಿ
ತಪವ ವಿದ್ಯೆ ಸಾಸಯೋಗ
ಜಪವ ವ್ರತವ ನಡೆಸಬಹುದು
ಗುಪಿತಲಿಂಗದಲ್ಲಿ ಮನವನಿಡಲಿಕಾಗದು || ಪ ||
ಶೈಲತಟಗಳಲ್ಲಿ ಪರ್ಣ
ಶಾಲೆಯನ್ನು ಕಟ್ಟಿ ಕಂದ
ಮೂಲ ಫಲವ ಸವಿದು ತಪವ ಮಾಡಿ ವಿದ್ಯದ
ಜಾಲವನ್ನು ಕಲಿತು ಇಂದ್ರ
ಜಾಲಗಳನ್ನು ತೋರಬಹುದು
ಮೇಲೆ ಲಿಂಗದಲ್ಲಿ ಮನವನಿಡಲಿಕ್ಕಾಗದು || ೧ ||
ದೂರದೃಷ್ಟಿ ದೂರ ಶ್ರವಣ
ಮಾರಣಾದಿ ಮಂತ್ರತಂತ್ರ
ಏರಿ ಗಗನದಲ್ಲಿ ಚರಿಸೆ ನೆನೆದ ಠಾವಿಗೆ
ಸೇರುವುದನು ಪಡೆಯಬಹುದು
ಮಾರಿ ಯಕ್ಷಿಣಿಯರ ಭಜಿಸಿ
ಸೇರಿ ಲಿಂಗದಲ್ಲಿ ಮನವನಿಡಲಿಕಾಗದು || ೨ ||
ಹುಲಿಯ ಕೂಡ ಸೆಣೆಸಬಹುದು
ಮಲೆತ ಗಜದ ಇದಿರಿನಲ್ಲಿ
ಚಲಿಸದಂತೆ ನಿಂದು ಕಾದಬಹುದು ಸಿಂಹದ
ಅಲಗಬಹುದು ಮೀಸೆಯನ್ನ
ಉಳಿದ ಸಾಸವಂತದಿರಲಿ
ಒಲಿದು ಲಿಂಗದಲ್ಲಿ ಮನವನಿಡಲಿಕ್ಕಾಗದು || ೩ ||
ಅಂಬಿಕಾದಿ ಯೋಗದಿಂದ
ಕುಂಬಿಣಿಯನ್ನು ಸಹಜ ಬಿಟ್ಟು
ಅಂಬರವನು ಏರಬಹುದು ಆದಿಯಿಲ್ಲದೆ
ಸಂಭ್ರಮದಲಿ ನಿತ್ಯಕೋಟಿ
ತುಂಬ ಜಪವ ನಡೆಸಬಹುದು
ನಂಬಿ ಲಿಂಗದಲ್ಲಿ ಮನವನಿಡಲಿಕಾಗದು || ೪ ||
ಅನ್ಯ ವಾಕ್ಯವನ್ಯ ಜಪವ
ನನ್ಯದೈವಗಳನು ಬಿಟ್ಟು
ಉನ್ನತದಲಿ ನಡಿಸಬಹುದು ಸಕಲ ವ್ರತವನು
ಚೆನ್ನಷಡಕ್ಷರಿಯ ಲಿಂಗ ತನ್ನ ತಾನೆ ಒಲಿಯದನಕ
ಇನ್ನು ಲಿಂಗದಲ್ಲಿ ಮನವನಿಡಲಿಕಾಗದು || ೫ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”