Previous ಮಾತಿನ ಬಳಕೆಯಲ್ಲದೆ ಶರಣರ ಸ್ವರ ವಚನಗಳು Next

ಅಕ್ಕಮಹಾದೇವಿ ಯೋಗಾಂಗ ತ್ರಿವಿಧಿ

*

- ಅಕ್ಕಮಹಾದೇವಿ

ಯೋಗಾಂಗ ತ್ರಿವಿಧಿ

ಅಕ್ಕಮಹಾದೇವಿಯ-ಯೋಗಮಾರ್ಗ:ಅಕ್ಕನ "ಯೋಗಾಂಗ ತ್ರಿವಿಧಿ" ಎಂಬುದು ಒಂದು ಸಂಕ್ಷಿಪ್ತ ಕೃತಿ. ಇದನ್ನು ಗಮನವಿಟ್ಟು ಓದಿದಾಗ ವಚನ ವಾಜ್ಞ್ಮಯದ ಹಿನ್ನೆಲೆಯಲ್ಲಿ ಮತ್ತು ಇಡೀ ಭಾರತೀಯ ದಾರ್ಶನಿಕ ಭಿತ್ತಿಯಲ್ಲಿ ಅಕ್ಕನ ಯೌಗಿಕ ಮತ್ತು ಅನುಭಾವಿ ದರ್ಶನ ಎಷ್ಟು ವಿಶಿಷ್ಟವೆನ್ನುವುದನ್ನು ಗುರುತಿಸಬಹುದು. `ಯೋಗಾಂಗ ತ್ರಿವಿಧಿ~ಯಲ್ಲಿ ಅಕ್ಕ ಬಳಸುವ ಅಭಿವ್ಯಕ್ತಿಯ ಭಾಷೆ ಎಲ್ಲ ತತ್ವಪದಗಳಲ್ಲಿರುವಂತೆ ನೇರ ಮತ್ತು ಬೆಡಗಿನ ಶೈಲಿಗಳ ಮಿಶ್ರಣ. ಕೆಲವು ಸಲ ಅರ್ಥಗಳು ಸ್ವಯಂಪ್ರಕಾಶವಾಗಿ ಬೆಳಗುತ್ತವೆ. ಕೆಲವು ಸಲ ಸಂಕೇತಗಳ ಬಳಕೆಯಿಂದ ಗೂಢವಾಗಿ ನಮ್ಮನ್ನು ತಲುಪುತ್ತವೆ. ಇಷ್ಟಾದರೂ ಯೋಗಸಾಧನೆಯ ಬಗ್ಗೆ ಒಂದು ಸ್ಪಷ್ಟವಾದ ಸುವ್ಯವಸ್ಥಿತವಾದ ಗ್ರಹಿಕೆಯನ್ನು ಅದು ಮಂಡಿಸುತ್ತದೆ.

"ಯೋಗಾಂಗ ತ್ರಿವಿಧಿ" ಸಂಸ್ಕೃತದ ಶಾಸ್ತ್ರಗ್ರಂಥಗಳ ಮಾದರಿಗೆ ಹೊರತಾಗಿಯೂ ಒಂದು ಶಾಸ್ತ್ರರಚನೆ. ವಿಶೇಷವೆಂದರೆ ಇಂಥಾ ಶಾಸ್ತ್ರಗ್ರಂಥದಲ್ಲೂ ಹಲವೆಡೆ ಅಕ್ಕನ ಕಾವ್ಯಪ್ರತಿಭೆ ಮಿಂಚುತ್ತದೆ. ಉದಾಹರಣೆಗೆ ಒಂದು ತ್ರಿಪದಿ: `ಮಾಗಮಾಸವು ಪೋಗಿ ಮೇಗೆ ಬಂದಿತು ಚೈತ್ರ/ಬೇಗ ಮಾಮರನು ತಳಿರಿತ್ತು-ಅದ ಕಂಡು/ಕೂಗಿ ಕರೆದಿತ್ತು ಕಳಕಂಠ~. ಅಕ್ಕನ ಕಾವ್ಯಾತ್ಮಕ ವಚನಗಳನ್ನು ತಾತ್ಪರ್ಯಗೊಳಿಸುವುದು ಕಷ್ಟ.

ಅವನ್ನು ಹಾಗೇ ಸವಿದು ಅರ್ಥಗಳನ್ನು ಒಳಗಿಳಿಸಿಕೊಳ್ಳಬೇಕು.

ಶ್ರೀ ಮಹಾಮಹಿಮನೆ ಸೋಮಶೇಖರ ಗುರುವೆ,
ಕಾಮಿತ ಫಲವ ಕೊಡು ಕಂಡಾ ಎನ್ನ| ಹೃ
ದ್ವಾಮದೊಳ್ ನಿಂದು ಮೆರೆ ಕಂಡಾ || 1 ||

ಮೊದಲು ಮಾಡುವೆ ನಾನು ಸದಮಲ ಗುರುವಿನ
ಚದುರ ಮತಿಗಳನು ಬಲಗೊಂಡು | ತತ್ವದ
ಪದಗಳನಾಂತು ಮುದದಿಂದ || 2 ||

ಜೀವ ಪರಮರ ಭೇದಭಾವವನರಿವಡೆ
ಆವಾವಮುಖದೊಳಿರುತಿಹುದೊ| ಎನ್ನಯನು
ಭಾವಕ್ಕೆ ಬಂದುದನೊರೆವೆನು || 3 ||

ಶರಣರ ನೆಲೆಗಳನ್ನು ಅರಿವಡೆ ಅಗಣಿತವು
ಹರಿಯಜ ಸುರರಿಗಳವಲ್ಲ | ವೆಂದೆನಲು
ಒರೆದೆನು ಅವರ ಕೃಪೆಯಿಂದ || 4 ||

ಎಲ್ಲ ದೇವರ ದೇವ ವಲ್ಲಭನೆ ಗುರು ಚನ್ನ
ಮಲ್ಲಿಕಾರ್ಜುನನೆ ಮನದೊಳಗೆ| ಇರು ಕಂಡಾ
ಬಲ್ಲಂತೆ ನಿಮ್ಮ ಸ್ತುತಿಸುವೆನು || 5 ||

ಆರು ಭೂತಂಗಳಲಿ ಆರಾರು ತತ್ವದಲ್ಲಿ
ಪೂರೈಸಿ ಇಪ್ಪ ಘನವನ್ನು | ಮನದಲ್ಲಿ
ಆರೈದು ತಿಳಿದಡವ ಮುಕ್ತ || 6 ||

ಮಾಘಮಾಸವುಪೋಗೆ ಮೇಗೆ ಬಂದಿತು ಚೈತ್ರ
ಬೇಗ ಮಾಮರನು ತಣ್ಣೀರೆರೆ | ಅದ ಕಂಡು
ಕೂಗಿ ಕರೆಯಿತ್ತು ಕಳಕಂಠ || 7 ||

ಆಕಾಶದೊಳಗಣ ಜ್ಯೋತಿಯ ಪ್ರಭೆ ಬಂದು
ಲೋಕಂಗಳೊಳಗೆ ಮುಸುಕಲು | ಅದರೊಳಗೆ
ಏಕಾಂಗಿಯಾದಡವ ಯೋಗಿ || 8 ||

ಒಂಬತ್ತು ವೆಜ್ಜದ ತುಂಬಿದ ಕೊಡನೊಳಗೆ
ಸಂಭ್ರಮದ ಮುತ್ತು ಇರುತಿಹುದು | ಅದರನುವ
ನಂಬಿಕಂಡವನೆ ಕಡು ಜಾಣ || 9 ||

ಅಷ್ಟದಳಕಮಲದ ಬಟ್ಟಬಯಲೊಳಗೊಂದು
ಮುಟ್ಟಬಾರದ ಘನವಿಹುದು | ಅದರೊಳಗೆ
ದೃಷ್ಟಿ ಇಟ್ಟವನೆ ನಿಜಮುಕ್ತ || 10 ||

ಕೋಡಗದ ಒಡಗೂಡಿ ಆಡುವ ನರಿನಾಯಿ
ಗೀಡಾದ ಮನೆಯ ಮುರಿದೆನು| ಮತ್ತೊಂದು
ಗೂಡಿನೊಳು ನಾನು ಮೆರೆದೆನು || 11 ||

ಒಡಹುಟ್ಟಿದೈವರ ಒಡನೆ ಶಿರಗಳ ಹರಿದು
ಮಡದಿಯ ಕರವ ಹಿಡಿದೆನು | ಮುಂದಣ
ನಡುಬಟ್ಟೆಯೊಳಗೆ ನಡೆದೆನು || 12 ||

ನುಡಿಯಬಾರದು ಹಣ್ಣು ಕಡೆಯೊಳಗಿರಲಾಗಿ
ಮಡದಿಯೋರ್ವಳು ಅದಕಂಡು | ಗ್ರಹಿಸಿ
ನುಡಿಯೊಳಗಾಗಿ ಮೆರೆಯಿತ್ತು || 13 ||

ನೂರೊಂದು ಮಣಿಗಳನು ಮೂರು ಭಾಗವ ಮಾಡಿ
ಮೂರು ಪುರುಷರಿಗೆ ಅಳವಡಿಸಿ | ಮೂವರನು
ಸೇರಿ ನಾನಳಿದು ಬಯಲಾದೆ ||14 ||

ಒಂದು ರತ್ನವು ತಾನು ಮುಂದೆ ಈರಾರಾಗಿ
ಕುಂದದೈವತ್ತು ತೆರನಾದ | ರತ್ನವು
ಸಂದಿತು ಎನ್ನ ಮನದೊಳಗೆ . || 15 ||

ಊರೊಳಗಾಡುವ ಮಾರಿಯ ಹಿಡಿತಂದು
ಭಾರಿಯ ಕೋಳ ಅಳವಡಿಸಿ | ಆ ಪುರವ
ಮಾರಿದೆ ಒಬ್ಬ ಚದುರಂಗೆ || 16 ||

ಕೋಟಿ ರವಿಶಶಿಗಳಿಗೆ ಮೀಟಿದ ಪ್ರಭೆ ಬಂದು
ನಾಟಿತ್ತು ಎನ್ನ ಕರದೊಳಗೆ | ಅದರಿಂದ
ದಾಟಿದೆನು ಭವದ ಕುಣಿಗಳನು || 17 ||

ಅಂಬರದೊಳಗಣ ತುಂಬಿದ ಕೊಡನುಕ್ಕಿ
ಕುಂಭಿನಿಯ ಮೇಲೆ ಸುರಿಯಲು | ಮಾನವರು
ಶಂಭುಲೋಕಕ್ಕೆ ತೆರಳಿದರು || 18 ||

ಮೊರೆವ ನಾದವ ಕೇಳಿ ಉರಿವ ಜ್ಯೋತಿಯ ನೋಡಿ
ಸುರಿವ ಅಮೃತವ ದಣಿದುಂಡ | ಕಾರಣವು
ತೊರೆದನು ಜನನ ಮರಣಗಳ || 19 ||

ಅಷ್ಟದಿಕ್ಕಿಲಿ ಅಷ್ಟಶಕ್ತಿಯರು ರುದ್ರರು
ಅಷ್ಟದಿಕ್ಪಾಲಗಣಗಳ | ನಡುವಿರ್ದ
ಕಟ್ಟಾಣಿ ಮುತ್ತ ಬರಸೆಳೆದೆ || 20 ||

ಒಂಬತ್ತು ದ್ವಾರದ ಇಂಬುಗಳ ಬಲಿವುತ್ತ
ತುಂಬಿ ಸುಷುಮ್ಮೆಯೋಳು ಮನವ | ನೋಡಿ
ಕುಂಭದೊಳಮೃತ ಸುರಿವುದು || 21 ||

ಆರು ಮುಖ ಮುತ್ತನು ನೀರೊಳಗೆ ಇರಿಸಲು
ನೀರಳಿದು ಮುತ್ತು ಉಳಿಯಲು | ಆ ಮಣಿಯ
ಸೇರಿಸಿದೆನೆನ್ನಯ ಉರದೊಳಗೆ || 22 ||

ಉಪ್ಪರ ಗುಡಿ ಮೇಲೆ ಸರ್ಪನು ಹೆಡೆಯತ್ತಿ
ಎಪ್ಪತ್ತು ಪುರವ ನಲಿದುಂಡು | ದಣಿಯದೆ
ಕಪ್ಪೆಯ ಶಿರವ ಮುರಿಯಿತ್ತು || 23 ||

ಹಿತ್ತಲಬಾಗಿಲ ತೆರೆದು ಸತ್ತವನ ಎಬ್ಬಿಸಿ
ಹೆತ್ತಮ್ಮನ ಕರೆವ ಪಿಡಿಯಲು| ಅವಳೀಗ
ಇತ್ತಳೈ ತನ್ನ ಪದಕವನು || 24 ||

ಕೋಣನ ಕೊಂಬಿನ ಮೇಲೆ ಮಾಣದೆ ಕಪಿಯೇರಿ
ಜಾಣೆಯ ಮನೆಯವೊಳ ಪೊಗಲು| ಅವಳೆದ್ದು
ಕೋಣನ ಕಾಲಮುರಿದಿಹಳು || 25 ||

ಹೇಮಕೂಟದ ತುದಿಗೆ ಆ ಮಹಾ ಗಜವೇರಿ
ಸೋಮನ ಕಳೆಯ ಸವಿದುಂಡು | ಮದವೇರಿ
ಕಾಮನ ಪಿಡಿದು ಬಡಿಯಿತ್ತು || 26 ||

ಪಶ್ಚಿಮ ಕೊಳದಲ್ಲಿ ಅಚ್ಚ ತಾವರೆ ಅರಳಿ
ನಿಶ್ಚಳದ ಗಂಧವೆಸೆಯಲು| ಅದಕಂಡು
ಸಚ್ಚಿತ್ತದ ಭ್ರಮರ ಎರಗಿತ್ತು || 27 ||

ನವಪುರದೊಳಗೊಂದು ನವರತ್ನ ಬೆಲೆಯಾಗೆ
ನವನಾರಿಯರು ಅದಕಂಡು | ಕೊಳಲಿಕ್ಕೆ
ಭವಸೂತ್ರ ಹರಿದು ಬಯಲಾದೆ || 28 ||

ಬೆಟ್ಟದ ಮೇಲಣ ಕಿಚ್ಚು ಸುಟ್ಟಿತು ಕಾನನವ
ಅಷ್ಟಮೃಗಜಾತಿ ಅಳಿದವು| ಅದಕಂಡು
ಬಟ್ಟಬಯಲೊಳಗೆ ಮೆರೆದೆನು || 29 ||

ಕೊಂಡಕ್ಕೆ ಬೀಳ್ವಂತ ಲಂಡಸ್ತ್ರೀಯಳು ತಾನು
ದಂಡೆಯ ಕುಣಿಕೆ ಸಡಿಲಿಸಿ | ಕೊಂಡದ
ಕೆಂಡದೊಳಾಳಿ ಮುಳುಗಿದಳು || 30 ||

ಕುಂಡಲಿಯ ಸರ್ಪನು ತುಂಡ ಮೇಲಕೆ ತೆಗೆಯ
ಮಂಡಲವು ಮೂರು ಬೆಳಗಾಗೆ | ನಡುವಳ
ಖಂಡಜ್ಯೋತಿಯಲಿ ಬಯಲಾದೆ || 31 ||

ಅಷ್ಟಾವರಣದ ಹಣ್ಣು ಬಟ್ಟ ಬಯಲೊಳಗಿರಲು
ಅಷ್ಟಾಂಗಯೋಗಗಳ ಮಾಡಿ | ಬಳಲುವರಂ
ದೃಷ್ಟಿ ಇಡುವುದನ್ನು ಮರೆವರು || 32 ||

ನೆಲನಿಲ್ಲದ ತೋಟದಲಿ ಎಲೆಯಿಲ್ಲದ ಗಿಡ ಹುಟ್ಟಿ
ಫಲವಿಲ್ಲದ ಹಣ್ಣು ತಳೆದಿರಲು| ಅದ ಕಂಡು
ಮೆಲಲಿಲ್ಲದೆ ಹೋಗಿ ಸವಿದೆನು || 33 ||

ಸಪ್ತಸಾಗರ ಬತ್ತಿ ಹತ್ತು ಹಂಸೆಯು ಸತ್ತು
ಮುತ್ತು ಮಾಣಿಕವು ತಲೆದೋರೆ| ಅದ ಕಂಡು
ಸತ್ತವನು ಎದ್ದು ಕುಣಿದನು || 34 ||

ಹತ್ತು ಸಾಗರದಲ್ಲಿ ಮತ್ತೆ ಸ್ನಾನವ ಮಾಡಿ
ಮತ್ತೊಂದು ತೆರದ ಉಣಿಸುಗಳ | ನಾನುಂಡು
ಕತ್ತಲೆಯಳಿದು ಬೆಳಗಾದೆ || 35 ||

ಕರ್ತೃ ಶ್ರೀಗುರುರಾಯ ಮುತ್ತಿನ ಕವಚವ
ಅರ್ತಿಯಿಂದೆನಗೆ ಅಳವಡಿಸೆ | ಅದರಿಂದ
ಕಿತ್ತೆನು ಮಾಯಾಬಲೆಗಳನು || 36 ||

ನಡೆವೆನು ಲಿಂಗದ ಕೂಡೆ ನುಡಿವನು ಲಿಂಗದವೊಡನೆ
ಎಡವಿಡದೆ ಬಪ್ಪ ವಿಷಯದ | ಭೋಗಂಗಳ
ಕೊಡುವೆನು ಲಿಂಗಮುಖಗಳಿಗೆ || 37 ||

ಒಂಬತ್ತು ಚೌಕದಲಿ ಉಂಬುಡುವ ಮನೆಯನ್ನು
ನಂಬದೆ ಕಡೆಗೆ ತೊಲಗಿಸಿ | ಮುಂದಣ
ಸಂಭ್ರಮದ ಮನೆಗೆ ನಡೆದೆನು || 38 ||

ಗುರುವೆನ್ನ ಕಾಯವು ಹರನೆನ್ನ ಮನವಯ್ಯ
ಪರಮ ಜಂಗಮವೆ ಅನುಭಾವ | ಮುಖವೆನ್ನ
ಇರವೆಲ್ಲ ಲಿಂಗಮಯವಯ್ಯ || 39 ||

ಉಟ್ಟ ಸೀರೆಯ ಸೀಳಿ ತೊಡಿಗೆಯ ಮುರಿದು
ಬಿಟ್ಟೆನು ನಾನು ಬಿಡುಮುಡಿಯ | ಎಲೆ ದೇವ
ಕೊಟ್ಟೆನು ಎನ್ನ ತನುಮನವ || 40 ||

ಷಟ್ಕಮಲದೊಳಗಣ ಷಡ್ವಿಧ ಲಿಂಗಕ್ಕೆ
ಷಡ್ವಿಧೇಂದ್ರಿಯಗಳ ಮುಖಮಾಡಿ | ವಿಷಯಗಳ
ಷಡ್ಭಕ್ತಿಯಿಂದ ಕೊಡುತಿಹೆನು || 41 ||

ಆಧಾರದೊಳಗಣ ಆದಿಯ ಲಿಂಗಕ್ಕೆ
ಮೇದಿನೀ ಫ್ಯಾಣಮುಖಮಾಡಿ | ಗಂಧದ
ಮೋದವ ಕೊಡುವ ನಿಜಭಕ್ತ || 42 ||

ಆರೆಸಳ ಕಮಲದಲಿ ತೋರುವ ಲಿಂಗಕ್ಕೆ
ಸಾರಜಿಹೈಗಳ ಮುಖಮಾಡಿ | ರಸಗಳ
ಪೂರೈಸಿ ಕೊಡುವ ನಿಜ ನಿಷ್ಠ || 43 ||

ಹತ್ತೆಸಳ ಕಮಲದಲಿ ಗೊತ್ತಿನ ಲಿಂಗಕ್ಕೆ
ಮತ್ತೆ ನೇತ್ರಗಳ ಮುಖಮಾಡಿ | ರೂಪಿನ
ತುತ್ತುಗಳ ಕೊಡುವ ಅವಧಾನಿ || 44 ||

ದ್ವಾದಶದಳ ಕಮಲದ ಮೋದದ ಜಂಗಮಕೆ
ಸಾದರದ ತ್ವಕ್ಕ ಮುಖಮಾಡಿ | ಸ್ಪರುಶದ
ಸ್ವಾದವ ಕೊಡುವ ಅನುಭಾವಿ || 45 ||

ಷೋಡಶದಳ ಕಮಲದಲಿ ಆಡುವ ಲಿಂಗಕ್ಕೆ
ಗಾಢದ ಶ್ರೋತ್ರ ಮುಖಮಾಡಿ | ಶಬ್ದವ
ನೀಡಿ ಕೊಡುತಿಹನು ಪರಿಣಾಮಿ || 46 ||

ದ್ವಿದಳತ್ರಿಕೂಟದಲಿ ಹುದುಗಿದ ಲಿಂಗಕ್ಕೆ
ಸದಮಲದ ಹೃದಯ ಮುಖಮಾಡಿ | ತೃಪ್ತಿಯ
ಒದಗಿ ಕೊಡುತಿಹನು ಚದುರೈಕ್ಯ || 47 ||

ಅಂಗದಾಶ್ರಯವಳಿದು ಲಿಂಗದಾಶ್ರಯವುಳಿದು
ಲಿಂಗದೊಳು ಮನವು ಒಡವರದ | ಕಾರಣವು
ಅಂಗಗುಣವೆನಗೆ ಇನಿತಿಲ್ಲ || 48 ||

ಗುರು ನಿಮ್ಮ ಚರಣವ ಮರೆಯನು, ಮರೆದಡೆ
ಪರಿಭವದ ಬಾಧೆ ಬರಲಯ್ಯಾ | ಕಡೆಯಲ್ಲಿ
ದೊರೆ ನರಕದೊಳಗೆ ತುಳಿಯಯ್ಯ || 49 ||

ನಡೆವಲ್ಲಿ ನುಡಿವಲ್ಲಿ ಉಡುವಲ್ಲಿ ಉಂಬಲ್ಲಿ
ಬಿಡೆನಯ್ಯ ನಿಮ್ಮ ಚರಣವ | ಈ ಛಲವ
ಕಡೆ ಮುಟ್ಟಿಸೆನಗೆ ಗುರುರಾಯ || 50 ||

ಘನಗುರುವೆ ನೀನೆನ್ನ ಮನದೋಳೇ ಇರು ಕಂಡ್ಯಾ
ಮನವ ಬಿಟ್ಟಿನಿತು ಅಗಲಿದಡೆ | ನಿಮಗಿನ್ನು
ಅನಘ ಶರಣರ ಅಡಿಯಾಣೆ || 51 ||

ಆವಾವ ಭೋಗಗಳ ಜೀವಭಾವದಿ ನಾನು
ಭಾವಿಸಿ ಪಿಡಿದು ಸವಿದಡೆ | ನರಕದ
ಭಾವಿಯೊಳಗದ್ದಿ ತೆಗೆಯಯ್ಯ || 52 ||

ಗುರು ಕೊಟ್ಟ ಭೋಗವನ್ನು ಗುರುವಿಗೆ ನಾನಿತ್ತು
ಗುರುಮುಖದಿಂದ ಒದಗಿದ | ಶೇಷವನು
ಇರದೆ ನಾನುಂಡು ಸುಖಿಯಾದೆ || 53 ||

ಲಿಂಗವು ಬಂದೆನ್ನ ಅಂಗದೊಳು ನೆಲಸಲು
ಅಂಗವು ಲಿಂಗದೊಳಗಾದೆ | ಕಾರಣವು
ಹಿಂಗಿದವು ಎನ್ನ ಭವಗಳು || 54 ||

ನಾನಾ ಜನ್ಮಗಳೊಳಗೆ ನಾ ತೊಳಲುತಿರಲಾಗಿ
ನೀನೆನಗೆ ಬಂದು ಕೃಪೆಯಾದ | ಕಾರಣವು
ನಾ ನಿನ್ನ ಪಾದದೂಳೆಡವರೆದೆ || 55 ||

ಹಿಂದಣ ಭವಗಳೆಲ್ಲ ಸಂದಿತ್ತು ಇಲ್ಲಿಗೆ
ಮುಂದಿನ್ನು ಎನಗೆ ಭವವಿಲ್ಲ | ಗುರುರಾಯ
ಹೊಂದಿದೆನು ನಿಮ್ಮ ಚರಣದೊಳು || 56 ||

ನಿಮ್ಮ ತೊತ್ತಿನ ತೊತ್ತು ನಿಮ್ಮ ಭೃತ್ಯರ ಭೃತ್ಯೆ
ನಿಮ್ಮಡಿಯ ನಾನು ಮರೆಹೊಕ್ಕೆ | ಘನಗುರುವೆ
ನಿಮ್ಮ ಕೃಪೆಯಿಂದ ಸಲಹಯ್ಯಾ || 57 ||

ಎನ್ನ ಕಾಯವೆ ಗುರು ಎನ್ನ ಪ್ರಾಣವೆ ಲಿಂಗ
ಎನ್ನಂತರಾತ್ಮ ಚರಲಿಂಗ | ವಾಗಲು
ಇನ್ನುಂಟೆ ಎನಗೆ ತನುಮನವು || 58 ||

ಜಯ ನಿತ್ಯ ರೂಪನೆ ಜಯ ಸತ್ಯಸದ್ಗುರುವೆ
ಜಯಭಕ್ತರರಸ ಅಘಹರನೆ | ಮದ್ಗುರುವೆ
ಜಯ ಎನ್ನ ಮನದ ತವನಿಧಿಯ || 59 ||

ನಲ್ಲಳು ನಲ್ಲನ ಸುಖವ ಎಲ್ಲರಿಗೆ ಅರುಹುವಳೆ ?
ಬಲ್ಲಡೆ ಅದರ ತೆರನಂತೆ| ಲಿಂಗಸುಖ
ಬಲ್ಲವರು ಪರರಿಗುಸುರುವರೆ || 60 ||

ಚಿನ್ನ ಬಣ್ಣಗಳಂತೆ ರನ್ನ ದೀಪ್ತಿಗಳಂತೆ
ಭಿನ್ನವಿಲ್ಲದೆ ಬೆರೆದಿಹರು | ಲಿಂಗದೊಳು
ಪನ್ನಗಧರನ ಶರಣರು || 61 ||

ಎಲ್ಲ ಭೋಗಂಗಳಲಿ ಪಲ್ಲಯಿಸಿ ಇರುವವರು
ಬಲ್ಲಡೆ ಅವರ ಪರಿಬೇರೆ |
ಶರಣರ ಖುಲ್ಲ ಮಾನವರು ಜರಿವರು || 62 ||

ಭಕ್ತರ ತೊತ್ತಾಗಿ ಇರಿಸೆನ್ನ
ಭಕ್ತರುಂಡುಳಿದ ವರಶೇಷ | ಗಳಕೊಂಬ
ನಿತ್ಯ ಸುಖವೆನಗೆ ಕೊಡು ಗುರುವೆ || 63 ||

ಎನ್ನವಗುಣಗಳ ಇನ್ನು ನೋಡದೆ ಗುರು
ಚನ್ನಮಲ್ಲೇಶ ಕೃಪೆಗೈದ | ಕಾರಣ
ಎನ್ನ ಪರಿಭವವು ಪರಿಯಿತ್ತು || 64 ||

ಬಲ್ಲವರೆ ಬಲ್ಲರು ಎಲ್ಲರಿಗೆ ತಿಳಿಯದು
ಕಲ್ಲೋಳಗೆ ಅನಲ ಇರುವಂತೆ | ಇದರನುವ
ಬಲ್ಲವರಿಗರ್ಥ ತಿಳಿವುದು || 65 ||

ಯೋಗಾಂಗ ತ್ರಿವಿಧಿಯ ರಾಗದಿಂ ಬರೆದೋದಿ
ರೋಗ ಭವಬಾಧೆ ಪರಿವುದು | ಲಿಂಗದೊಳ
ಗಾಗಿ ಸುಖದಿಂದ ಮೆರೆವರು || 66 ||

ಗುರುಚನ್ನಮಲ್ಲನ ವರಕೃಪಾರಸವೆನ್ನ
ಶರೀರವ ತುಂಬಿ ಹೊರಸೂಸೆ | ಅದರಿಂದ
ಬರೆದೆನು ಬಲ್ಲ ಪರಿಯಲ್ಲಿ || 67 ||

ಮಂಗಳಾರತಿ

ಕಂಗಳ ನೋಟವು ಕಾಯದ ಕರದಲಿ
ಲಿಂಗದ ಕೂಟವು ಶಿವ ಶಿವ ಚೆಲುವನು
ಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆ
ನಾರತಿಯ, ಬೆಳಗುವೆನಾರತಿಯ ||ಪ||

ಜಗವಂದ್ಯಗೆ ಬೇಟವ ಮಾಡಿದೆ ನಾ
ಹಗೆಯಾದೆನು ಸಂಸಾರಕ್ಕೆಲ್ಲಾ
ನಗುತೈದರೆ ಲಜ್ಜೆಯ (ನಾಚಿಕೆಯನು) ತೊರೆದವಳೆಂದೆನ್ನ|
ಗಗನ ಗಿರಿಯ ಮೇಲಿರ್ದಹನೆಂದಡೆ
ಲಗುನೆಯಾಗಿ ನಾನರಸುತ ಬಂದೆನು
ಅಘಹರ ಕರುಣಿಸು ನಿಮಗಾನೊಲಿದೆನು
ಮಿಗೆ ಒಲಿದಾರತಿಯ || 1 ||

ಭಕುತಿ- ರತಿಯ ಸಂಭಾಷಣೆಯಿಂದವೆ
ಮುಕುತಿಯ ಮರೆದೆನು, ಕಾಯದ, ಜೀವದ
ಪ್ರಕೃತಿಯ ತೊರೆದೆನು ಸುತ್ತಿದ ಮಾಯಾಪಾಶವ ಹರಿದೆನಲಾ|
ಸುಕೃತಿಯಾಯ್ತು ನಿಮ್ಮಯ ನೆನಹಿಂದವೆ
ಮುಕುತಿಯ ಫಲಗಳ ದಾಂಟಿಯ ಬಂದೆನು
ಶಕುತಿಯಾದನಾಪ್ರಾಣಲಿಂಗಕೆ
ಮನವೊಲಿದಾರತಿಯ || 2 ||

ಮೆಚ್ಚಿ ಒಲಿದು ಮನವಗಲದ ಭಾವವು
ಬಿಚ್ಚದೆ ಬೇರೆಂದೆನಿಸದ ಪ್ರಾಣವು
ಬೆಚ್ಚಂತಿರ್ದುದು ಅಚ್ಚೊತ್ತಿದ ಮಹಾಘನ ತಾ ನೆಲೆಗೊಂಡು
ಪಶ್ಚಿಮ ಮುಖದಲಿ ಬೆಳಗುಪ್ರಕಾಶವು
ನಿಚ್ಚನಿರಂಜನ ಚನ್ನ ಮಲ್ಲಿಕಾರ್ಜುನ
ದೇವಂಗೆತ್ತುವೆನಾರತಿಯಾ ಮನವೊಲಿದಾರತಿಯಾ || 3 ||

*
ಪರಿವಿಡಿ (index)
Previous ಮಾತಿನ ಬಳಕೆಯಲ್ಲದೆ ಶರಣರ ಸ್ವರ ವಚನಗಳು Next