ರಚನೆ: ಶ್ರೀ ಮುಪ್ಪಿನ ಷಡಕ್ಷರಿ
ಧರೆಯ ಸುಖದ ಭೋಗವೆನಗೆ
ಹರಿದು ಹೋಗಲಯ್ಯ ನಿಮ್ಮ
ಚರಣಕಮಲದಲ್ಲಿ ಮನವು ಮಗ್ನವಾಗಲಿ || ಪ ||
ಒಡೆದ ಗಡಿಗೆ ಹರಿದ ಜೋಳಿ
ಗೆಡದ ಕೈಯ್ಯ ಮುರಿದ ಕೋಲು
ಹಿಡಿದು ಊರನೆಲ್ಲ ತಿರಿದು ತಂದು ನೋಡಲು
ಒಡಲಿಗಾಗದಂತೆ ಮಾಡು
ಪೊಡವಿಯೊಳಗೆ ಸುಖವ ಮೆಚ್ಚಿ
ಒಡೆಯ ನಿಮ್ಮ ಮರೆದು ಭವಕೆ ಬೀಳಲಾರೆನು || ೧ ||
ಊರನೆಲ್ಲ ತಿರಿದು ಒಡಲ
ಪೂರನುಂಬೆನೆಂದು ಬರಲು
ದಾರಿಯಲ್ಲಿ ತಿರಿದುದೆಲ್ಲ ಚೆಲ್ಲಿ ಹೋಗಲಿ
ಮೀರಿಯಾಚೆ ಪುರವ ತಿರಿಯೆ
ಯಾರು ಇಲ್ಲ ಎನಲಿ ಎನಗೆ
ಮಾರಹರನ ನೆನೆವುದಿಂತುಟಲ್ಲದಾಗದು || ೨ ||
ಹಳೆಯ ಅರಿವೆ ರಗಟೆಗಳನು
ಬಲಿದು ಗಂಟನಿಕ್ಕಿ ಹೊದೆಯೆ
ಚಳಿಯದಾಗಲೊಂದು ಕಡೆಗೆ ಸಾಲದ೦ದದಿ
ಕಳೆಯುತಿರಲು ಅದರೊಳರ್ಧ
ಇಲಿಗಳೆಳೆದು ಒಯ್ಯುತ್ತಿರಲಿ
ಒಲಿದು ನಿಮ್ಮ ಚರಣ ನೆನೆವುದಿಂತುಟಾಗದು || ೩ ||
ಒಡೆಯರುಗಳ ಮಠಕೆ ಬರಲು
ಜಡಿದು ಜರಿದು ನೂಕಲೆನ್ನ
ಒಡೆನೆಯೊರ್ವರುಗಳ ಕೀಳಿನಲ್ಲಿ ಸೇರಲು
ಕಡೆಗೆ ಅಟ್ಟಲವರು ಹಾಳು
ಗುಡಿಗೆ ಬರಲು ಸೋರುತಿರಲು
ಒಡೆಯ ನಿಮ್ಮ ನೆನೆವುದಿಂತುಟಲ್ಲದಾಗದು || ೪ ||
ಅಂಗಳದೊಳು ನಿಲ್ಲಲಿಕೆ
ಹಿಂಗದಿವನು ಕಳ್ಳನೆಂದು
ಹಿಂಗಿ ಹೋಗಲೆಂದು ಎನ್ನ ಜರಿದು ನುಡಿಯಲಿ
ಹೀಂಗೆಯಾಗದನಕ ಜನರ
ಸಂಗ ಬಿಡದು ಷಡಕ್ಷರಿಯ
ಲಿಂಗದಂಫ್ರಿ ನೆನೆವುದಿಂತುಟಲ್ಲದಾಗದು || ೫ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”