ರಚನೆ: ಚೆನ್ನಬಸವಣ್ಣ
ಅಂದಾದನಂದು ಅಂದಾದನಂದು ಬಸವನಂದಾದನಂದು || ಪ ||
ನಾಲ್ಕುಯುಗವಾಗದಂದು ಉಮೆಯ ಕಲ್ಯಾಣವಿಲ್ಲದಂದು
ಮೇರುಮಂದಿರವಿಲ್ಲದಂದು ಹಸಿವು ತೃಷೆಯುದಕವಿಲ್ಲದಂದು || ೧ ||
ಅಸುರಾದಿಗಳು ನೆರೆದು ಧರೆಯ ಮಂಥನವ ಮಾಡದಂದು
ಮೇರುಗಿರಿ ಕಡೆಗೋಲಾಗದಂದು ವಾಸುಗಿ ತೆಗೆನೇಣಾಗದಂದು || ೨ ||
ಭೂಮಂಡಲವು ಉರಿಯಾಗಿ ಅಸುರರು ನೆಲೆಗೊಳ್ಳದೋಡಿ
ಧೃತಿಗೆಡಿಸಲಿಕ್ಕಾ ವಿಷವು ಹೊರವಂಡದಂದು || ೩ ||
ಬಂದು ಸುರರು ಬಿನೈಸಿ ನಿಂದು ಪ್ರಸಾದವ ಬೇಡೆ
ಇಂತೆಂದ ನುಡಿಗೆ ಒಳಗಾಗಿ ವಿಷವು ಸಾಧ್ಯವಾಗದಂದು || ೪ ||
ಪ್ರಸಾದ ಬಂದಡೆ ಒಳಕೊಂಡು ವಿಷವಡಗಿ ಉಳಿದಂದು
ಪ್ರಸಾದಿಸ್ಥಲವರಿಯದಂದು ಪರವು ಸಾಧ್ಯವಾದಂದು || ೫ ||
ಒಂದೆಂದಡೆ ಸಂದೊಂದು ಎರಡೆಂಬುದು ತಾನಾಗಿಲ್ಲ
ಒಂದೆರಡರ ಸಂದಳಿಯದೆ ಉಳಿದಂದು || ೬ ||
ಆದಿ ಪ್ರಸಾದಿಯೋ! ಅಂತ್ಯ ಪ್ರಸಾದಿಯೋ
ಕೂಡಲಚನ್ನಸಂಗಯ್ಯನಲ್ಲಿ ತಾ ಪ್ರಸಾದಿಯೋ || ೭ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”