Previous ಶಿವನೊಳಗೆ ಮೋಹವಿರೆ ತಾನೆ ಶಿವನು ಮಗಳೆ ಎನ್ನಯ ಮಾತು ಕೇಳು Next

ಮುಂದೆ ಏನಪ್ಪುದೋ

ಕುಸುಮಷಟ್ಪದಿ

ತನುವಿನಾ ಗುಣವು ನಿ
ಮ್ಮನು ನೆನೆಯಲೀಯದಲೆ
ಘನಮಹಿಮನೇ ಮುಂದೆ ಏನಪ್ಪುದೋ || ಪ ||

ಆರಣ್ಯದೊಳಗಿಹನೆ
ಧೀರತನವೆನಗಿಲ್ಲ
ಊರೊಳಗಿಹನೆ ವಾಗ್ವಿಷಯ ಘನವು
ಮಾರಾರಿ ನಿಮ್ಮುವನು
ಸೇರಲೀಯದು ಮನವು
ಗಾರಾದೆ ನಾಮುಂದೆ ಏನಪ್ಪನೋ || ೧ |

ಇರುಳು ನಾ ನೆನೆವೆನೆನೆ
ಇರುಳು ನಿದ್ರೆಯ ಜಡವು
ಇರದೆ ಹಗಲೆನಗೆ ವ್ಯವಹರದ ಹಸಿವು
ತೊರೆಯಲಾರೆನು ಅಶನ
ತರುಬಲಾರೆನು ನಿದ್ರೆ
ಮರಳಿ ನಾಮುಂದೆ ಇನ್ನೇನಪ್ಪೆನೋ || ೨ ||

ಘನವ ನಾ ನೆನೆವೆನೆನೆ
ಮನ ಹಲವು ನೆನೆವುತಿದೆ
ಮನವ ಹಿಡಿತರುವನಕ ನಿಮಗೆ ಮುನಿಸು
ಮನಭೋಗ ಬಯಸುವದು
ತನು ಸೊಬಗಿಗೆಳಸುವದು
ಘನಮಹಿಮ ನಾ ಮುಂದೆ ಏನಪ್ಪೆನೋ || ೩ ||

ಅಂಗವನು ವೇಷದಲ್ಲಿ
ಶೃಂಗರಿಸಿ ಫಲವೇನು
ಲಿಂಗದೊಳು ಮನ ಪ್ರಾಣ ಬೆರೆಯದನಕ
ಅಂಗಜಾರಿಯೆ ಎನ್ನ
ಸಂಗವನು ನೀನೊಲ್ಲೆ
ಲಿಂಗವೇ ನಾ ಮುಂದೆ ಏನಪ್ಪೆನೋ || ೪ ||

ಮನವು ಬೇರೆನ್ನುವನು
ಜಿನುಗಿ ಕಾಡುತ್ತಲಿದೆ
ನೆನಹಿಂಗೆ ಬಾರದಿರೆ ನೀನೆನ್ನುವ
ಅನವರತ ಕಾಡುತಿಹೆ
ಅನುಪ್ರಾಣಿ ನೀ ಕರುಣ
ವನು ಮಾಡು ಶಿವಷಡಕ್ಷರಿಲಿಂಗವೆ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಶಿವನೊಳಗೆ ಮೋಹವಿರೆ ತಾನೆ ಶಿವನು ಮಗಳೆ ಎನ್ನಯ ಮಾತು ಕೇಳು Next