Previous ಏನನೋದಿ ಏನು ಫಲ ಮನವನಾಶ್ವರಾರ ಕಾಣೆನು Next

ಏನು ಮಾಡಲಯ್ಯ

ರಚನೆ: ಶ್ರೀ ಮುಪ್ಪಿನ ಷಡಕ್ಷರಿ


ಏನು ಮಾಡಲಯ್ಯ ಎನ್ನ
ಹೀನ ಮನದ ಬಯಕೆಗಳನು
ಜ್ಞಾನ ಖಡ್ಗದಿಂದ ಕಡಿವರಾರ ಕಾಣೆನು || ಪ ||

ಹಿಡಿವುದದನೆ ಹಿಡಿಯದಯ್ಯ
ಹಿಡಿಯದದನೆ ಹಿಡಿವುದಯ್ಯ
ಕೆಡುವ ನಡೆಯ ನಡೆಸಿ ಎನ್ನ ಭವಕೆ ಬರಿಸಿತು
ಬಡವ ನಾನು ಕಾಡುತಿಹುದು
ಹಿಡಿದು ಮನದ ಕೈಯ ಕಾಲ
ಕಡಿದು ಕಡಿದು ಹಾಕುವವರನಾರ ಕಾಣೆನು || ೧ ||

ನಾನು ನಿಮ್ಮ ನೆನೆವೆನೆನಲು
ತಾನು ನಿಮ್ಮ ನೆನೆಯದಯ್ಯ
ಶ್ವಾನನಂತೆ ಹಲವು ಕಡೆಗೆ ಹರಿಯುತಿರ್ಪುದು
ಧ್ಯಾನ ಮೌನಜಪದೊಳಿರದು
ನಾನು ಇದರ ಸಂಗದಿಂದ
ಜ್ಞಾನಹೀನನಾಗಿ ಕೆಟ್ಟು ಹೋದನಕ್ಕಟಾ || ೨ ||

ಅಂಗಗುಣದ ನಡೆಗಳೆನಲು
ಹಿಂಗಿಸುತ್ತ ಬರುತಲಿಹುದು
ಲಿಂಗನೆನಹ ಏನಲು ಎಲ್ಲೊ ನುಸುಳಿ ಪೋಪುದು
ಮಂಗಳಾತ್ಮ ಷಡಕ್ಷರಿಯ
ಲಿಂಗ ನಿಮ್ಮ ನೆನಯದಿರ್ಪ
ಕೊಂಗು ಮನವ ಶಿಕ್ಷಿಸೆನ್ನ ಅಳಲು ಪೋಗಲಿ || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಏನನೋದಿ ಏನು ಫಲ ಮನವನಾಶ್ವರಾರ ಕಾಣೆನು Next