Previous ಕಾಯಮೋಹವನ್ನು ಮರೆ ಹಿರಿದು ಕಿರಿದು ಇಲ್ಲ Next

ಕೋಪವೆನಗೆ ಲೋಪವಾಗದು

ಭೋಗಷಟ್ಪದಿ

ಚಂದ್ರಧರನಿಗೊಲಿಯದಿರ್ಪ
ಇ೦ದ್ರಿಯಗಳ ಜಯಿಸದನಕ
ಸಾಂದ್ರವಾದ ಕೋಪವೆನಗೆ ಲೋಪವಾಗದು || ಪ ||

ದುಷ್ಟ ನುಡಿಯ ಬಿಡದೆ ಒಲಿದು
ಮುಟ್ಟಿ ಕೇಳ್ವ ಹಾಗೆ ಶಿವನ
ಶ್ರೇಷ್ಠವಾದ ಶಾಸ್ತ್ರ ಕೇಳದಿರ್ಪ ಕಿವಿಯೊಳು
ಇಟ್ಟು ಮೊಳೆಯ ಕೊಡತಿಯಿಂದ
ತಟ್ಟಿ ಆಚೆ ಈಚೆಗಾಗು
ವಷ್ಟು ಬಡಿಯದನಕ ಎನ್ನ ಸಿಟ್ಟು ಹೋಗದು || ೧ ||

ಮೆಚ್ಚಿ ಶಿವನಸೋಂಕಿ ಸೊಕ್ಕಿ
ಹಚ್ಚಿ ಪುಳಕವೇರದೊಲಿದು
ನಿಚ್ಚಲನ್ಯ ಸೋಂಕುಗಳಿಗೆ ಎಳೆವ ತ್ವಕ್ಕನು
ಕೊಚ್ಚಿ ಕೊಚ್ಚಿ ಕಡಿದು ಕಡಿದು
ನುಚ್ಚುನುರಿಯ ಮಾಡದನಕ
ಕೆಚ್ಚುಗೊಂಡ ಕೋಪದುರಿಯ ಕಿಚ್ಚು ಪೋಗದು || ೨ ||

ಬಿಡದ ಲಿಂಗವನ್ನು ನೋಡ
ಲೊಡನೆಯಶ್ರುಜಲಗಳುಕ್ಕಿ
ಕಡೆಗೆ ಪರಿಯದನ್ಯ ರೂಪ ನೋಳ್ ನಯನಕೆ
ಒಡೆಯ ! ಹೆಟ್ಟಿ ಮಳಲ ತಂದು
ಕೆಡಹಿ ಹೊಯ್ದು ದಸಿಗಳಲ್ಲಿ
ಜಡಿಯದನಕ ಎನ್ನ ಕೋಪವಡಗಿ ಪೋಗದು || ೩ ||

ಶೂಲಧರನ ಹಾಡಿಹಾಡಿ
ಲೀಲೆ ಮಿಕ್ಕು ಹೊಗಳದನ್ಯ
ಕಾಳುನುಡಿಯ ಹಗಲು ಇರುಳು ನುಡಿವ ಜಹ್ವೆಯ
ಸೀಳಿಸೀಳಿ ಹೋಳು ಮಾಡಿ
ಮೇಲೆ ಸುಣ್ಣ ನೀರನೆರೆದು
ಮಾಲೆಗಟ್ಟದನಕ ಮನದ ಜ್ವಾಲೆ ಹೋಗದು || ೪ ||

ಲಿಂಗಕೀಯದಿರುವ ಅರಳ
ಭಂಗದಂತೆ ಅರಿವ ಮೂಗ
ಹಾಂಗೆ ಸೀಳದನಕ ಕೋಪ ಹಿಂಗಿ ಹೋಗದು
ಮಂಗಳಾತ್ಮ ಷಡಕ್ಷರಿಯ
ಲಿಂಗ ನಡಿಗೆ ಒಲಿಯದಿಂದ್ರಿ
ಯಂಗಳಳಿಯದನಕ ಸುಖವು ಸಾಂಗ ಮಾಗದು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಕಾಯಮೋಹವನ್ನು ಮರೆ ಹಿರಿದು ಕಿರಿದು ಇಲ್ಲ Next