Previous ಇನ್ನೆನಗೆ ಭಯವುಂಟೆ ಉಳುಹಿರಯ್ಯ Next

ಘನಮಹಿಮಲಿಂಗವೆ

ಕುಸುಮಷಟ್ಪದಿ

ಘನಮಹಿಮಲಿಂಗವೇ
ಅನು ಪ್ರಾಣಿ ಎನ್ನ ಕರ
ವನಜಕ್ಕೆ ಬಂದು ಚುಳುಕಾದಿರಲ್ಲ || ಪ ||

ತರಣಿಕೋಟಿಪ್ರಭೆಯ
ಕಿರಿದೆನಿಪ ಬೆಳಗಿನಾ
ವರಹೇಮಶೈಲಾಗ್ರದೊಳಗೊಪ್ಪುವ
ಹರಗಣಂಗಳ ಸುಖವ
ನೆರೆಯುಳಿದು ಎನ್ನ ಕರ
ಸರಸಿಜಕ ಬಂದು ಚುಳುಕಾದಿರಲ್ಲ || ೧ |

ಹರಿಯಜರ ತಿಂಥಿಣಿಯು
ಸುರರುಗಳ ಮೊತ್ತವಾ
ವರಮುನೀಶ್ವರರುಗಳ ಸಂತಾನದ
ಹರುಷದಾನಂದದೊಳು
ಇರದುಳಿದು ಎನ್ನ ಕರ
ಸರಸಿಜಕೆ ಬಂದು ಚುಳುಕಾದಿರಲ್ಲ || ೨ ||

ಹರಿಗೆ ನಿಲುಕದ ಚರಣ
ಸರಸಿಜಭವನಿಗೊಮ್ಮೆ
ಅರಸಿ ಕಾಣದ ನಿಮ್ಮ ಶ್ರೀ ಮುಕುಟವು
ಪರಮವಾಚಾತೀತ
ಕಿರಿದಾಗಿ ಎನ್ನ ಕರ
ಸರಸಿಜಕೆ ಬಂದು ಚುಳುಕಾದಿರಲ್ಲ || ೩ ||

ಮಡದಿ ಗಿರಿಜಾತೆಯನು
ತೊಡೆಯ ಮೇಲಿಂದಿಳುಹಿ
ಒಡನೆ ಗುಹಗಣಪವೀರೇಶರೆನಿಪ
ಕಡುಮೋಹದತಿ ಸುತರ
ಬಿಡುತೆನ್ನ ಕರದೊಳಗೆ
ಒಡೆಯರೊಡೆಯನೆ ಬಂದು ಚುಳುಕಾದಿರಲ್ಲ|| ೪ ||

ಎನ್ನಲ್ಲಿ ಯುಪಚಾರ
ವಿನ್ನೇನು ನಿಮಗುಂಟು
ಸನ್ನುತದ ಶಿವಷಡಕ್ಷರಿಲಿಂಗವೆ
ಎನ್ನ ಮನ ಪ್ರಾಣಗಳು
ಹೊನ್ನು ಹಾವಿಗೆಯಾಗಿ
ನಿನ್ನ ಚರಣಕೆ ಯೋಗ್ಯ ಮೆಟ್ಟಾಗಲಿ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಇನ್ನೆನಗೆ ಭಯವುಂಟೆ ಉಳುಹಿರಯ್ಯ Next