ಎಲ್ಲವು ತಾನು ತಾನಲ್ಲದೆ ಬೇರಿಲ್ಲ
ಅಲ್ಲಿ ಇಲ್ಲಿ ಎಂಬ ಸೊಲ್ಲಿದೆ ಎಲ್ಲ || ಪ ||
ಆಧಾರ ಪೃಥ್ವಿ ಆಚಾರಲಿಂಗದಿ ಭಕ್ತಿ
ಆಧಾರದಿಂದ ನಾಸಿಕದಲ್ಲಿ ವೇಧಿಸಿ
ತಾಳಿ ಗಾಳಿ ಗಂಧವನಪ್ಪಿ ವಾಸಿಸುವ
ನಾದಿಲಿಂಗವು ತಾನೆ ಶಿವಶರಣನೆನ್ನಿ || ೧ ||
ಕುಲಛಲಗಳಿಲ್ಲದ ಮಹೇಶ್ವರ ಸ್ವಾಧಿಷ್ಠಾನ
ಜಲಮಯದ ಗುರುಲಿಂಗ ಜಿಹ್ವೆಯಲ್ಲಿ
ನಲಿದು ಷಡುರುಚಿಯ ಸೇವಿಸುತಿರ್ಪ
ನೊಲವಿಂದ ಸ್ಥಲನೆಲೆಯ ತಾನೆ ಶಿವಶರಣನೆನ್ನಿ || ೨ ||
ಅಗ್ನಿಯ ಅಂಗ ಮಣಿಪೂರಕದಿ ನೇತ್ರಮನ
ಪ್ರಸಾದಿಯೆ ಶಿವಶರಣನೆನ್ನಿ
ಲಿಂಗದಲ್ಲಿ ಪ್ರಾಜ್ಞತ್ವದಿಂದ ಚಿನ್ಮಯರೂಪ
ನಾವರಿಸಿ ಸುಜ್ಞಾನದಿಂದರ್ಪಿಸಿ ಶಿವಶರಣನೆನ್ನಿ || ೩ ||
ಅನಾಹತದಲ್ಲಿಯ ಸಂಗಸುಖದೊಳಗಿನ
ವ್ರತವು ಪ್ರಾಣಲಿಂಗಿಯೆ ತ್ವಕ್ಕು ಜಂಗಮಲಿಂಗ
ಅನಾಹತದಲ್ಲಿಯೂ ಸಂಗ ಸ್ಪರುಶನವೆ
ಸರ್ವಾ೦ಗದೊಳು ಇಂಗಿತದಿ ಭೋಗಿಸುವ ಶಿವಶರಣನೆನ್ನಿ || ೪ ||
ಆಕಾಶ ಕಾಯ ವಿಶುದ್ಧಿ ಶರಣನ ಶಬ್ದ
ಸಾಕಾರ ಸೂತ್ರ ಪ್ರಸಾದಲಿಂಗ
ಆಕಾರವಪ್ಪ ಸ್ವಯನಾದ ಸುನಾದಗಳು
ಸ್ವೀಕರಿಸಿಕೊಂಡಿಪ್ಪ ಶಿವಶರಣನೆನ್ನಿ || ೫ ||
ಅನುಭಾವಿಯಾತ್ಮನ ಆಜ್ಞೆಯೊಳಗೈಕ್ಯನೆಂದೆನಿಸಿ
ಮನವ ಮಹಾಲಿಂಗವೆನಿಸುತಿರ್ಪ
ಘನಕೆ ಘನವಾಗಿ ಆವರಿಸಿಕೊಂಡಿರ್ಪ
ಶಿವಶರಣರುಗಳಿಂದ ಶಿವಶರಣನೆನ್ನಿ || ೬ ||
ಆರು ಮುಖದಲಿರುತಿರ್ಪ
ಆರಾರು ತತ್ವಗಳ ಸಾರಿ ಷಡ್ವಿದ
ದೊಳರ್ಪಣವ ಮಾಡಿ ಸೂರೆಗೊಂಡಿರ್ಪ
ಚಿದಾತ್ಮ ಷಡಾಕ್ಷರಿಯೆ ಆರಾರು ಲಿಂಗಕಧಿಕ ಶಿವಶರಣನೆನ್ನಿ || ೭ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ
ಉಲ್ಲೇಖ ಟಿಪ್ಪಣಿ: ಮುಪ್ಪಿನ ಷಡಕ್ಷರಿಗಳ ಹೆಚ್ಚಿನ ಪದಗಳು