ಭೋಗಷಟ್ಪದಿ
ಏಕೆ ಬಯಲು ಭ್ರಾಂತು ನಿನಗೆ
ಸಾಕು ಪರರ ತಿಳುಹದಿರು ವಿ
ವೇಕಿಯಾಗಿ ನಿನ್ನ ನೀನೆ ತಿಳಿದು ನೋಡೆಲೈ || ಪ ||
ತನ್ನ ತಾನೆ ಪಕ್ವಮಾದ
ಹಣ್ಣು ತೊಟ್ಟು ಕಳಚಿ ಬಿದ್ದು
ಮುನ್ನಿನಂತೆ ಹೋಗಿ ತೊಟ್ಟು ಹತ್ತಬಲ್ಲುದೆ
ಬನ್ನಬಡುವ ಜನ್ಮ ತೀರಿ
ತನ್ನ ನಿಜವ ಅರಿದ ಆತ್ಮ
ಮುನ್ನಿನಂತೆ ಲೋಕದವರ ಕೂಡಬಲ್ಲನೇ || ೧ |
ಹಸಿಯ ಕಾಯ ಕೊಯ್ದು ತಂದು
ಬಿಸಿಯ ತೋರಿ ಮುಸುಕಿ ಇಡಲು
ನಸಿದು ಹೋಹುದಲ್ಲ ದದುವ ಪಕ್ವವವುದೇ
ವಸುಧಯಾತ್ಮನನ್ನು ತಂದು
ಸಸಿನೆ ಇಟ್ಟು ಬೋಧಿಸಿದಡೆ
ಅಸಮಜ್ಞಾನಿಯಾಗಿ ಶರಣರೊಳಗೆ ಬೆರೆವನೇ || ೨ ||
ಸತ್ಯ ಜ್ಞಾನ ತಪವು ಮೌನ
ನಿತ್ಯ ಕ್ಷಮೆಯು ದಮಯು ಶಾಂತಿ
ಉತ್ತಮತ್ವವಿರಲು ಪಕ್ವವೆಂದು ತಿಳಿವುದು
ಒತ್ತಿ ನೋಡಲವರ ಮನವ
ಮತ್ತೆ ಬೈಯ್ದು ಹೊಯ್ದು ನೋಡೆ
ಚಿತ್ತದಲ್ಲಿ ಸ್ವಸ್ಥವಾಗಿ ಕಲಕದಿರ್ಪುದು || ೩ ||
ಹುಸಿಯು ಹುಳುಕು ಡಂಭಕತ್ವ
ಕೊಸರು ಕೋಪ ನೀಚಹೃದಯ
ನುಸುಳು ವಿಷಯ ವಿರಲಪಕ್ವವೆಂದು ಅರಿವುದು
ಸಸಿನೆ ಅವನ ಕೆಣಕಿ ನೋಡೆ
ಕಿಸುಕುಳತ್ವ ತೋರುತಿಹುದು
ಒಸೆದು ಅವರ ತಿಳುಹೆ ಸ್ವಸ್ಥ ಶರಣರಪ್ಪರೆ || ೪ ||
ಇವರ ಭೇದ ಅರಿಯದನಕ
ಅವರ ತಿಳುಹಿ ಫಲವದೇನು
ಭವಕೆ ಹೋಗಲವರು ತನಗೆ ಕೊರತೆಯುಪ್ಪುದೇ
ಭವದ ಕಡೆಯ ಕಂಡ ಬಳಿಕ
ಶಿವನ ನಿಜವು ತಾನೆಯಹುದು
ಶಿವ ಷಡಕ್ಷರಾಂಕ ನಿಮ್ಮ ಶರಣರಪ್ಪರು || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ