ರಚನೆ: ಶ್ರೀ ಮುಪ್ಪಿನ ಷಡಕ್ಷರಿ
ತನುವಿಡಿದ ದುಷ್ಕೃತವ
ನೆನಿತೆನಲು ಪೇಳುವೆನು
ಮನವೊಲಿದು ಕೇಳು ನೀನೆಲೆಯಾತ್ಮನೆ || ಪ ||
ಅನ್ನ ಉದಕದ ಚಿಂತೆ
ಎಣ್ಣೆ ನೀರಿನ ಚಿಂತೆ
ಬಣ್ಣ ಬಳಿದಾಭರಣ ತೊಡುವ ಚಿಂತೆ
ಮಣ್ಣು ಮನೆಗಳ ಚಿಂತೆ
ಹೊನ್ನು ಹೆಣ್ಣಿನ ಚಿಂತೆ
ಇನ್ನು ಪುತ್ರರ ಬೇಡಿ ಬಳಲ್ವ ಚಿಂತೆ || ೧ ||
ಅರಸುಗಳ ಭಯವಿದಕೆ
ಚರಿಪ ಚೋರರ ಭಯವು
ಮರಳಿ ಅಗ್ನಿಯ ಭಯವು ನೀರ ಭಯವು
ಉರಗ ವ್ಯಾಘ್ರನ ಭಯವು
ಅರಿ ರೋಗಗಳ ಭಯವು
ಕರಕಷ್ಟ ತನುವಿದರೆ ಭಯವು ನೋಡಾ || ೨ ||
ಶೀತೋಷ್ಣಗಳ ಭೀತಿ
ಭೂತ ಪ್ರೇತದ ಭೀತಿ
ಓತು ನಡಿಯಲು ಮುಳ್ಳುದನಿಯ ಭೀತಿ
ಮಾತು ಮಥನದ ಭೀತಿ
ರಾತ್ರಿ ಹಗಲಿನ ಭೀತಿ
ಈ ತನುವ ಹಿಡಿದಿನಿತು ಭೀತಿ ನೋಡಾ || ೩ ||
ಆಗಲದಕೇನಿನಿತು
ಸಾಗಿಸಲು ನಿನಗಿವನು
ಆಗುವುದೆ ಧರೆ ಗಗನವುಳ್ಳತನಕ
ಆಗ ಹುಟ್ಟಿದ ಬಳಿಕ
ಬೇಗ ಸಾವೀ ತನುವ
ಹಾಗೆ ಮನವೇ ನೀನು ನಂಬಬಹುದೆ || ೪ ||
ಇಂತಪ್ಪ ತನುವಿನ
ಭ್ರಾಂತಿಯಳಿದಾಲಿಂಗ
ಚಿಂತೆಯೊಳಗಿರು ನಿನಗೆ ಸುಖವಪ್ಪುದು
ಮುಂತೆ ನಿನ್ನುವನುತ
ನ್ನಂತೆ ಮಾಡುವನೊಲಿದು
ಕಂತುಹರ ಶಿವಷಡಕ್ಷರಿಲಿಂಗವು || ೫ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”