Previous ಸಾರೆ ಚಲ್ಯಾದೆ ಮುಕುತಿ ಅಕ್ಕಮಹಾದೇವಿ ಯೋಗಾಂಗ ತ್ರಿವಿಧಿ Next

ಮಾತಿನ ಬಳಕೆಯಲ್ಲದೆ...

*

ಸ್ವರ ವಚನ ರಚನೆ: ಸಿದ್ದರಾಮೇಶ್ವರರು

ರಾಗ: ವಸಂತ

ಮಾತಿನ ಬಳಕೆಯಲ್ಲದೆ ತ್ರಿವಿಧದಿ
ಸೋತು ಸೈರಿಸುವ ಸದ್ಗುಣಿಗಳುಂಟೆ ||ಪ||

ರಸದಾಳಿಯ ಕಬ್ಬಿನ ಸರಿಯೆಂದು ಹಚ್ಚ
ಹಸಿಯ ಬಿದಿರ ಮೆಲ್ಲುವನಂತೆ
ರಸನೆ ಒಡೆದು ಹಲ್ಲು, ಮುರಿದಂತೆ ಭಕ್ತಿ
ವಶವಲ್ಲದೆ ತ್ರಿವಿಧ ವಂಚಕರಿಗೆ ||೧||

ಮೂರುವಿಡಿದು ಮೂರನರಿವುದು ಮತ್ತೆ
ಮೂರುವಿಡಿದು ಮೂರ ಬಿಡುವುದು
ಮೂರೊಂದು ರೂಪೆಂದರಿವುದು ಇನ್ನು
ಬೇರೆಂಬರ ನಾನೇನೆಂಬೆ ||೨||

ಬಾಣತಿಯಂತೆ ಭಕ್ತಿಯಗುಣ ಇಷ್ಟ
ಪ್ರಾಣಲಿಂಗಾಂಗ ಸಂಗದೋಳಿಹ
ಜಾಣನು ಸಕಲ ಕಲೆಯೋಳಿಹ ನಿ
ರ್ವಾಣಿಯ ನೆಲೆಯಳವಡುವುದೆ ||೩||

ಪಂಚಾಚಾರವಿಡಿದು ಭಕ್ತಿ ನಿ
ರ್ವಂಚಕನಾದಡೆ ಅದು ಮುಕ್ತಿ
ಸಂಚಲಿಸುವ ಮನವಳಿದೊಡೆ ನಿಃಪ್ರ
ಪಂಚನ ಬೆರೆಸುವುದರಿಂದಲ್ಲ ||೪||

ನುಡಿಯಬಹುದು ಅದೈತವ ಒಮ್ಮೆ
ನಡೆಯಬಾರದು ನಿರ್ಧರವಾಗಿ
ನುಡಿದಂತೆ ನಡೆವ ಮಹಾತ್ಮರ ಪಾದ
ವಿಡಿಸು ಕಪಿಲಸಿದ್ದಮಲ್ಲೇಶ್ವರ ||೫||

(ಈ ಸ್ವರವಚನವನ್ನು ಡಾ. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ” ಕೃತಿಯಿಂದ ಆಯ್ದುಕೊಳ್ಳಲಾಗಿದೆ)

ಪರಿವಿಡಿ (index)
*
Previous ಸಾರೆ ಚಲ್ಯಾದೆ ಮುಕುತಿ ಅಕ್ಕಮಹಾದೇವಿ ಯೋಗಾಂಗ ತ್ರಿವಿಧಿ Next