Previous ಮನವನಿಡಲಿಕಾಗದು ನಾನು ಒಲಿದು ಫಲವದೇನು Next

ನೀನು ರಕ್ಷಿಸಭವ

ರಚನೆ: ಶ್ರೀ ಮುಪ್ಪಿನ ಷಡಕ್ಷರಿ


ದೇವ ನೀನು ರಕ್ಷಿಸಭವ
ಜೀವಿ ನಾನು ಕರುಣಿ ನೀನು
ಸಾವು ಹುಟ್ಟುಗಳಿಗೆ ಬೆದರಿ ಹೆದರುತ್ತೈದೆನೆ || ಪ ||

ಎಡಹಿ ಬೀಳಬಲ್ಲೆ ನಾನು
ಒಡನೆ ಏಳಲರಿಯೆನಯ್ಯ
ನುಡಿಯಬಲ್ಲೆನಯ್ಯ ಮಿಗಿಲು ನಡೆಯಲಾರೆನು
ನುಡಿದ ಹಾಗೆ ನಡೆಯದವರ
ಒಡೆಯ ನೀನು ಒಲ್ಲೆಯವರ
ನಡೆಗಳಿಲ್ಲದಧಮ ನಾನು ರಕ್ಷಿಸೆನ್ನನು || ೧ ||

ಭಕ್ತಿ ಎನಗೆ ಇಲ್ಲವಯ್ಯ
ನಿತ್ಯ ಜ್ಞಾನವಿಲ್ಲವೆನಗೆ
ಮತ್ತೆ ವಿರತಿ ಎನಗೆ ಮೊದಲೆ ತಾನೆ ಇಲ್ಲವು
ಕರ್ತೃ ನೀನೆ ಒಲಿದು ನಿಮ್ಮ
ಚಿತ್ತದಲ್ಲಿ ಕರುಣ ಹುಟ್ಟಿ
ಎತ್ತಿ ರಕ್ಷಿಸೆನ್ನನಲ್ಲದಿರಲು ಕೆಡುವೆನು || ೨ ||

ನರಶರೀರವೆಂಬ ದೊಡ್ಡ
ಹಿರಿಯ ಕೋಳದೊಳಗೆ ಸಿಕ್ಕಿ
ಕರಗಿ ಕೊರಗಿ ಮರಗಿ ಅಳಲಿ ಬಳಲುತ್ತೈದೆನೆ
ಮರುಕವೇಕೆ ಇಲ್ಲವಯ್ಯ
ಕರುಣಿಯೆಂಬರಯ್ಯ ನಿಮ್ಮ
ಕೊರತೆ ನಿಮಗೆ ಬಾರದಂತೆ ರಕ್ಷಿಸೆನ್ನನು || ೩ ||

ಧೀರನಲ್ಲವಯ್ಯ ನಾನು
ವೀರನಲ್ಲವಯ್ಯ ಶಿವನ
ಘೋರತನುವ ತೊಡಿಸಿ ಎನ್ನನಿಳೆಗೆ ಬಿಟ್ಟಿರಿ
ಮಾರಹರನೆ ನಿನ್ನನುಳಿದು
ದೂರ ಕೇಳ್ವರಾರು ಎನ್ನ
ಪಾರಗಾಣಿಸಯ್ಯಾ ಕರುಣಶರಧಿ ಚಂದ್ರಮ || ೪ ||

ಕರುಣಿ ನೀನೆ ಬಲ್ಲೆ ನಾನು
ಹರಗಣಿಸಲು ಕರುಣಿಸಿದಿರಿ
ಇರದೆ ಅಹರ ಪ್ರಹರವೆನಲು ಒಡನೆ ಒಲಿದಿರಿ
ಸರಿದ ಕುಸುಮ ಶಿವನಿಗೆನಲು
ಕರುಣಿಸಿದಿರಿ ಬಿಡದೆ ಎನ್ನ
ಕರುಣಿಸಯ್ಯ ಪರಮ ಷಡಕ್ಷರಿಯ ಲಿಂಗವೆ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಮನವನಿಡಲಿಕಾಗದು ನಾನು ಒಲಿದು ಫಲವದೇನು Next