Previous ಏನು ಮಾಡಲಯ್ಯ ಮನವನಿಡಲಿಕಾಗದು Next

ಮನವನಾಳ್ವರಾರ ಕಾಣೆನು

ರಚನೆ: ಶ್ರೀ ಮುಪ್ಪಿನ ಷಡಕ್ಷರಿ


ಹುಲಿಯ ಕರಡಿ ಕರಿಯ ಫಣಿಯ
ಬಲುಹಿನಿಂದಲಾಳ್ವರುಂಟು
ಚಲಿಸದಂತೆ ಮನವನಾಳ್ವರಾರ ಕಾಣೆನು || ಪ ||

ಮೊರೆದು ಗರ್ಜಿಸುತ್ತ ಬರುವ
ಹಿರಿಯ ಹುಲಿಯ ಹಿಡಿದು ತಂದು
ಇರದೆ ತಮ್ಮ ಇಚ್ಛೆಯಲ್ಲಿ ಅಳುತಿರ್ಪರು
ಚರಿಸುತಿರ್ಪ ಕಿರಿಯ ಮನವ
ಪರಮಲಿಂಗದಲ್ಲಿ ಇರಿಸಿ
ಹರಿಯದಂತೆ ಆಳ್ವ ಹಿರಿಯರುಗಳ್ ಕಾಣೆನು || ೧ ||

ಕರಿಯ ಹಿಡಿದು ನಿಲಿಸಬಹುದು
ಕರಡಿಯನ್ನು ಕಟ್ಟಬಹುದು
ಮೊರೆವ ಫಣಿಯ ಹೆಡೆಯ ಕೈಯೊಳಿರಿಸಬಹುದೆಲೈ
ಕಿರಿಯ ಮನವ ಹಿಡಿದು ತಂದು
ಇರಿಸಿ ಲಿಂಗದಲ್ಲಿ ನೆರೆವ
ಹಿರಿಯರುಗಳ ಕಾಣೆ ಬರಿಯ ಬಲ್ಮೆ ನುಡಿವರು || ೨ ||

ಹರಿಸುರೇಂದ್ರದಿವಿಜರುಗಳ
ಪರಮಯೋಗಿ ಮನುಮುನಿಗಳ
ಮರವೆಯೆಂಬ ಕೂಪದಲ್ಲಿ ಇಕ್ಕಿ ತುಳಿವುದು
ಹಿರಿಯ ಧ್ಯಾನಿ ಮೌನಿಯೆಂಬ
ಹಿರಿಯರುಗಳನೆಲ್ಲರನ್ನು
ಅರಿವು ಮರವೆಯಲ್ಲಿ ಇಕ್ಕಿ ನುಸುಳಿಪೋಪುದು || ೩ ||

ಜಪದ ಬಲುಮೆಯಲ್ಲಿ ಇರದು
ತಪದ ಉಗ್ರಕಂಜಿ ನಿಲದು
ಅಪರಿಮಿತದ ಶಾಸ್ತ್ರ ಪಾಠಕರಿಗೆ ಸಿಲುಕದು
ಚಪಲತನದಿ ಹಿಡಿವೆನೆನಲು
ಉಪರಿಯಾಗಿ ನಿಲುಕದಿಹುದು
ಗುಪಿತ ಮನವ ಹಿಡಿವ ಪರಿಗಳಾವುವೆಂದೊಡೆ || ೪ ||

ಮುನ್ನ ತಾನು ಯಾರು ಎಂದು
ತನ್ನ ನಿಜವನರಿದ ಬಳಿಕ
ಚನ್ನ ಷಡಕ್ಷರಿಯ ಲಿಂಗ ತಾನೆಯಾಗಿಹ
ಇನ್ನು ಸರ್ವಜಗವದೆಲ್ಲ
ತನ್ನ ನಿಲುವೆಯಾಗಿ ತಾಗಿ
ಅನ್ಯವಿಲ್ಲವಾಗಿ ಮನವು ತಾನೆ ನಿಲುವುದು || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಏನು ಮಾಡಲಯ್ಯ ಮನವನಿಡಲಿಕಾಗದು Next