ವಾರ್ಧಕಷಟ್ಪದಿ
ಯುಗವನಂತವು ಹೋಗುತಿರುತಿಹವು ಅವರಲ್ಲಿ
ಜಗವನಾಳಿದ ರಾಯರುಗಳು ಹೋದರು ಕೆಲರು
ಮಿಗೆ ದನುಜಮನುಜರವಧಿಗಳಿಲ್ಲದಮರಗಣ ಸುರಸಿದ್ಧರುಗಳಳಿದರು || ಪ ||
ಆನಂದ ಸ್ವದಜಂ ತಾನುಂ ಜರಾಯುಜಂ
ಏನೆಂಬೆನಂಡಜಂ ಬೀಜಜಂ ಯುಗ ಮುಂದೆ
ನೀ ನೋಡು ಭಿನ್ನ ಯುಕ್ತಾಯುಕ್ತವ ಮದಾಯು ಮನ್ಯರಣಮಾನ್ಯರಣವು
ನೂನಯುಗ ವಿಶ್ವರಾಜ್ಞಾ ಕಾಲಸಮ್ಮಿತಂ
ನೀನು ತಿಳಿ ಕೃತ ತ್ರೇತ ದ್ವಾಪರಂ ಕಲಿಯುಗಂ
ತಾನು ತಿರುತಿರುಗಿ ಮರಮರಳಿ ಹೋಗುತ್ತಿಹವು ಮೂಢರಿವಗಳನರಿಯರು || ೧ ||
ಆದಿ ಮನುವಿಂದ್ರನು ಕಾಲ ಸ್ಥಲಂ ದುಂದು
ಮಾದಿ ತ್ರಿಶಂಕು ಸುತ ಹರಿಶ್ಚಂದ್ರ ಲೋಹಿತಂ
ಆದಿ ನಳ ಕೃಪ ಚ್ಯವನ ಪುರುರವಸುಗಳಿಂ ಪರೀತಾ ಪ್ರಿಯವರನಿಂದ
ಭೂಧವಂ ಮಾಂಧಾತನಾ ಭಗೀರಥನಾದಿ
ಯಾದ ಪರಿತಾಪಿಯಾಗಿರುವ ಗೋಪಾಲ ತಾ
ನಾದಿಯಹ ನಂದಗೋಪಾಲ ವಸುದೇವ ಶ್ರೀಕೃಷ್ಣಾದಿಗಳು ಅಳಿದರು || ೨ ||
ತಾಳಾಸುರಂ ಪಂಚಮೇಢ್ರಾಸುರಂ ವ್ಯಾಘ್ರ
ಲಾಳಾಸುರಂ ಶಕಟ ವಿಕಟಾಸುರಂ ನರಕ
ವ್ಯಾಳಾಸುರಂ ಕಾಕ ಮೂಕಾಸುರಂ ರಾವಣಂ ಸೋಮಕಾಸುರಕನು
ಜ್ವಾಲಾಸುರಂ ರಕ್ತಬೀಜಾಧರಂ ನಮುಚಿ
ಕಾಳಾಧರಂ ಬಲಿಯು ದೇವಾಂತಕಂ ಜಂಭ
ಏ ಜಾಳಂಧರ ಭಸ್ಮದೇವಾಸುರಂ ಮುಖ್ಯ ವಾಗಿರ್ದಸುರರಳಿದರು || ೩ ||
ಗೋರಟಂ ಚರ್ಪಟಿಯು ರತ್ನಗೋಪಂ ವ್ಯಾಳಿ
ಮತ್ಸೇಂದ್ರ ನಾಗಾರ್ಜುನಂ ಖರ್ಪರಂ
ಧಾರುಣಿಯೊಳಳಿದರೀ ಮನದಿಚ್ಛಮರಣದಾ ದ್ರೋಣ ಭೀಷ್ಮರು ಅಳಿದರು
ವಾರಿಜಾಕ್ಷಂ ವಾರಿಜೋದ್ಭವಂ ಮೊದಲಾದ
ಸುರೇಂದ್ರ ನಿರ್ಜರರು ಯಕ್ಷ ಕಿನ್ನರ ಗರುಡ
ಮಾರುತಾಸನನವರು ಈರೇಳು ಲೋಕದೊಳಗಳಿದರು ಕಾಣೆನು || ೪ ||
ಇವರ ಮಾತಂತಿರಲಿ ಔದುಂಬರದ ವೃಕ್ಷ
ತವ ಕಾಲಕಾಲಕ್ಕೆ ಫಲದೋರಿಯಳಿವಂತೆ
ಶಿವನೊಳಗೆ ಬ್ರಹ್ಮಾಂಡಕೋಟಿಗಳು ಬಗೆದೊಗೆದು ತೋರಿಯಡಗುತಲಿರ್ಪವು
ಭವರಹಿತ ಮಲಮಾಯೆಗಳ ರಹಿತ ಫಲರಹಿತ
ಶಿವಗಣಂಗಳು ನಿತ್ಯಸುಖದೊಳಿರುತಿಹರು ಗಡ
ಶಿವಷಡಕ್ಷರ ಲಿಂಗದೊಳಡಗಿ ಹೊರಗಿನಳಿವು ಉಳಿವುಗಳ ನೋಡುತಿಹರು || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ