Previous ಸರ್ವಾಂಗವನು ಸಲಿಸುವೆನು ಮುಂದೆ ಏನಪ್ಪುದೋ Next

ಶಿವನೊಳಗೆ ಮೋಹವಿರೆ ತಾನೆ ಶಿವನು

ಕುಸುಮಷಟ್ಪದಿ

ಶಿವನೊಳಗೆ ವಿಶ್ವಾಸ
ಶಿವನೊಳಗೆ ನಂಬಿಗೆಯು
ಶಿವನೊಳಗೆ ಮೋಹವಿರೆ ತಾನೆ ಶಿವನು || ಪ ||

ಕುರಿಯ ಹಿಕ್ಕೆಯ ತಂದು
ಹರನೆಂದು ಭಾವಿಸುತ
ಕುರಿಯ ಹಾಲನು ಕರೆದು ತಂದೆರೆಯುತ
ಇರುತಿರಲು ತಂದೆ ತಾ
ಪರಿತಂದು ಕೆಡಿಸಲು
ಶಿರವರಿದ ವಿಶ್ವಾಸವನು ನೋಡಿರೆ || ೧ |

ಭೂಮಿಯೊಳಗಭಿಮಾನ
ಕಾಮಿನಿಯರಿ೦ದೆಂದು
ಸೋಮಧರ‍ ಚರರೂಪಿನಿಂದ ಬಂದು
ಕಾಮಿನಿಯ ಬೇಡಿತ್ತ
ಭೂಮೀಶ ಬಲ್ಲಾಳ
ನಾ ಮಹಾ ವಿಶ್ವಾಸವನು ನೋಡಿರೆ || ೨ ||

ಏಣಾಂಕಧರ ನಿರವು
ಊನವಾಗಲು ಕ೦ಡು
ಕ್ಷೋಣೀಶ ತನ್ನ ಕರಯುಗವ ಕಡಿದು
ಕ್ಷೋಣಿಯೊಳು ನುತಿವೆತ್ತು
ಜಾಣ ಕರಗಳ ಪಡೆದ
ಬಾಣನೆಂಬ ನಂಬುಗೆಯ ನೋಡಿರೆ || ೩ ||

ಹಾಲು ಪಾಯಸ ತನ್ನ
ನಾಲಿಗೆಗೆ ಸವಿಯಾಗೆ
ಬಾಲೆ ತಾನುಂಬುವದನುಳಿದು ಬಳಿಕ
ಲೀಲೆಯಿಂದಲಿ ತಾನು
ಶೂಲಿಗುಣಿಸಿದಳೊಮ್ಮೆ
ಚೋಳಿಯಕ್ಕನ ಮೋಹವನು ನೋಡಿರೆ || ೪ ||

ಇಂತಪ್ಪ ವಿಶ್ವಾಸ
ಇಂತಪ್ಪ ನ೦ಬುಗೆಯು
ಇಂತಪ್ಪ ಮೋಹ ತನಗಿಲ್ಲದನಕ
ಸಂತತದಿ ಲಿಂಗವನು
ಮುಂತೆ ಪೂಜಿಸುತಿರಲು
ಎಂತೊಲಿವನಾ ಷಡಕ್ಷರಿ ಲಿಂಗವು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಸರ್ವಾಂಗವನು ಸಲಿಸುವೆನು ಮುಂದೆ ಏನಪ್ಪುದೋ Next