ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ
ಕಂಗಳ ನೋಟವು, ಕಾಯದ ಕರದಲಿ
ಲಿಂಗದ ಕೂಟವು ಶಿವಶಿವ ಚೆಲುವನು
ಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆನಾರತಿಯ |ಪಲ್ಲವಿ|
ಜಗವಂದ್ಯಗೆ ಬೇಟವ ಮಾಡಿದೆ, ನಾ
ಹಗೆಯಾದೆನು ಸಂಸಾರಕೆಲ್ಲ
ನಗುತೈದರೆ ಲಜ್ಜೆ ನಾಚಿಕೆಯೆಲ್ಲವ ತೊರೆದವಳೆಂದೆನ್ನ
ಗಗನಗಿರಿಯ ಮೇಲಿರ್ದಹನೆಂದೆಡೆ
ಲಗುನಿಯಾಗಿ ನಾನರುಸುತ ಬಂದೆನು
ಅಘಹರ ಕರುಣಿಸು ನಿಮಗಾನೊಲಿದೆನು ಮಿಗೆ ಒಲಿದಾರತಿಯ |೧|
ಭಕುತಿರತಿಯ ಸಂಭಾಷಣೆಯಿಂದವೆ
ಯುಕುತಿಯ ಮರೆದೆನು, ಕಾಯದ ಜೀವದ
ಪ್ರಕೃತಿಯ ತೊರೆದೆನು, ಸುತ್ತಿದ ಮಾಯಾಪಾಶವ ಹರಿದೆನಲಾ
ಸುಕೃತಿಯಾಯಿತು ನಿಮ್ಮಯ ನೆನಹಿಂದವೆ
ಮುಕುತಿಯ ಫಲಗಳ ದಾಂಟಿಯೆ ಬಂದೆನು
ಸಕುತಿಯಾದೆ ನಾ ಪ್ರಾಣಲಿಂಗಕೆ ಮನವೊಲಿದಾರತಿಯ |೨|
ಮೆಚ್ಚಿ ಒಲಿದು ಮನವಗಲದ ಭಾವವು
ಬಿಚ್ಚದೆ ಬೇರೊಂದೆನಿಸದೆ, ಪ್ರಾಣವು
ಬೆಚ್ಚಂತಿರ್ದುದು, ಅಚ್ಚೊತ್ತಿದಾ ಮಹಘನ ತಾ ನೆಲೆಗೊಂಡು
ಪಶ್ಚಿಮ ಮುಖದಲಿ ಬೆಳಗು ಪ್ರಕಾಶವು
ನಿಚ್ಚನಿರಂಜನ ಚೆನ್ನಮಲ್ಲಿಕಾರ್ಜುನ
ಗೆತ್ತುವೆನಾರತಿ ಈ ರತಿಯಿಂದವೆ ಮನವೊಲಿದಾರತಿಯ |೩|
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”