ರಚನೆ: ಶ್ರೀ ಮೈಲಾರ ಬಸವಲಿಂಗ ಶರಣರು
ಬಸವಲಿಂಗವೆಂಬೆದಕ್ಷರಗಳು ರಸನೆಯೊಳಿರಬೇಕು
ಶಶಿಕಾಂತದೊಳಿಹ ರಸದ ಪರಿಯೊಳೀ ವಸುಧೆಯೊಳಿರಬೇಕು || ಪ ||
ಅರುಹಿನ ಕುರುಹಿಡಿದವನೀತಲದೊಳವತರಿಸಿದ ಗಣಪಾಲ
ವರ ಗುರು ಲಿಂಗ ಸುಜಂಗಮ ಸೌಖ್ಯಾಕರ ಪಾವನಶೀಲ
ಪರಮ ಷಡಕ್ಷರ ಪಂಚಾಕ್ಷರವೆಂಬೆರಡರಾದಿ ಮೂಲ
ಶರಣ ಕರಮನಭಾವದಿಂದಲುಪಚರಿಸಿಕೊಂಬ ಲೋಲ || ೧ ||
ವೇದ ಶಾಸ್ತ್ರ ಪುರಾಣ ನಿಗಮದಧಿಮಥನದ ನವನೀತ
ಸಾದೇಹದೊಳಿಹ ನಾದಬಿಂದು ಕಳೆಗಳಿಗಲತ್ತತೀತ
ಮೂದೇವರ ಮುತ್ತಯ್ಯನ ಪೊತ್ತು ಸಲಹಿದೆನ್ನ ದಾತ
ಭೇಧಿಸಲಗಣಿತ ಬ್ರಹ್ಮಾಂಡಗಳನುದ್ಧರಿಸುವ ಪ್ರಖ್ಯಾತ || ೨ ||
ಭಕ್ತಿಯನೊಲ್ಲದ ನಿರುಪಾಧಿಕ ಸದ್‌ಭಕ್ತರಂತರಂಗ
ಮುಕ್ತಿಯ ಸೀಮೆಯ ಮೆಟ್ಟಿದವರ ಬಹಿರಂಗದಿಷ್ಟಲಿಂಗ
ಯುಕ್ತಿಯಿಂದ ಸದ್‌ಭಕ್ತಿಯ ಮಾಡುವರಂಗಲಿಂಗ ಸಂಗ
ಶಕ್ತಿಸಮೇತ ವಿರಕ್ತಿಯ ಮಾಡುವ ದೇಶಿಕರುತ್ತುಂಗ || ೩ ||
ಕಲಿಯುಗದೊಳು ಕಲ್ಯಾಣಪುರವರಾಧೀಶ್ವರ ಪ್ರಧಾನಿ
ಹಲಬರ ಮಧ್ಯದಿ ಬಿದ್ದ ಲಿಖಿತವ ತೆಗೆದೋದಿದ ಸನ್ಮಾನಿ
ಕುಲ ಛಲ ಮೊದಲಾದಷ್ಟಮದಗಳ ನೀಗಿದ ಸುತಯ್ದಾನಿ
ನೆಲಜಲಾಗ್ನಿಮರುತಂಬರಾತ್ಮ ಷಡುತತ್ತ್ವದ ಸುಜ್ಞಾನಿ || ೪ ||
ಭಿನ್ನ ಭಕ್ತಿಯೆನಗನ್ಯವೆಂಬ ಸದ್‌ಭಕ್ತ ದೇಹಿಕದೇಹಿ
ತನ್ನ ಭಜಿಸಿ ಬಳಿಕನ್ಯವನರಿಯದ ಸಜ್ಜನ ಜನಮೋಹಿ
ಚಿನ್ನ ಬಣ್ಣದಂತೆರಡರಿಯದ ಶಿವಶರಣರಲ್ಲಿ ಸ್ನೇಹಿ
ಚೆನ್ನವೀರ ಮಹೇಶ ನಿರಂಜನ ಜಂಗಮದಾಸೋಹಿ || ೫ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”