Previous ಹೂವಿಲ್ಲದ ಕಂಪು ಗುರುವಿನ ಭಜನೆ ಮಾಡಮ್ಮ Next

ಮುತ್ತಿನಂಥ ಮಾತು ಕೇಳಮ್ಮಾ !


ಮುತ್ತಿನಂಥ ಮಾತು ಕೇಳಮ್ಮ
ಗುರುವಿಗೆ ನೀ ಶರಣಾಗಮ್ಮ
ರತ್ನದ ನಿಧಿ ಒಳಗುಂಟಮ್ಮಾ
ಮುಚ್ಚಿಕೊಂಡಿವೆ ಏಳು ಪದರಮ್ಮಾ || ಪ ||

ಕಾಶಿಗೋದರದು ಇಲ್ಲಮ್ಮಾ
ಕಾಸುಕೊಟ್ಟರದು ಸಿಗದಮ್ಮಾ
ನಂಬಿಕೆ ಇಟ್ಟಿರಬೇಕಮ್ಮಾ
ಸಾಧಿಸಿ ರತ್ನವ ಪಡೆಯಮ್ಮಾ || ೧ ||

ಗಂಗಾಯಮನೆಯಳಿಜಮ್ಮಾ
ಸಂಗಮದೊಳು ನೀ ಮುಳುಗಮ್ಮಾ
ನಿಶ್ಚಳಲಾಗಿರು ತಂಗೆಮ್ಮ
ಅಲೆಗಳ ಹೊಡೆತ ಬಹಳಮ್ಮ || ೨ ||

ನೀಲಿಯ ಗುಡ್ಡಗಳೆರಡಮ್ಮ
ನಡುಮಧ್ಯದಿ ದಶಮದ್ವಾರಮ್ಮ
ತೈಲವಿಲ್ಲದ ಜ್ಯೋತಿ ಕಾಣಮ್ಮ
ಶಾಖವಿಲ್ಲದ ಪ್ರಕಾಶಮ್ಮ || ೩ ||

ತಾರೆಗಳಿಲ್ಲದ ಗಗನಿತಮ್ಮ
ಮಿಂಚದೆ ಬರಸಿಡಿಲೆರಗಿತಮ್ಮ
ಮೋಡವಿಲ್ಲದೆ ಮಳೆ ಸುರಿದಿತಮ್ಮ
ಭೂಮಿ ಇಲ್ಲದೆ ನೀರಹರಿದಿತಮ್ಮ || ೪ ||

ಶಿವ ತಾ ಕಟ್ಟಿದ ಪುರವಮ್ಮಾ
ಇಟ್ಟನೊಂಬತ್ತು ಕದನಮ್ಮಾ
ಕಾಣದ ಕದ ಒಂದಿತಮ್ಮ
ಮೆಟ್ಟಿಲಾರನೆತ್ತಿ ನೋಡಮ್ಮ || ೫ ||

ಮಂಗವೊಂದು ಮುಂಚೆ ಹೋಗಿತ್ತಮ್ಮ
ಸಂಗಡಿಗರ ಸದ್ದಡಗಿತಮ್ಮ
ದೇಹ ಕಧಿಕರ ಪುರಧೀಶಮ್ಮ
ಕುರುಹು ಕಣ್ಣೇಶನ ಮಾತಮ್ಮ || ೬ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಹೂವಿಲ್ಲದ ಕಂಪು ಗುರುವಿನ ಭಜನೆ ಮಾಡಮ್ಮ Next