Previous ಎನಗೆ ದೊಡ್ಡಿತೆ ಧರೆಯ ಭೋಗವಸ್ಥಿರ Next

ನಿಮ್ಮನರಿಯದೆ

ಭೋಗಷಟ್ಪದಿ

ಹಲವು ವಿದ್ಯೆ ಹಲವು ಶಾಸ್ತ್ರ
ಹಲವು ಮಂತ್ರಗಳನೆ ಕಲಿತು
ಹಲವು ಭವಕೆ ಬಂದರೆಸೆ ನಿಮ್ಮ ನರಿಯದೆ || ಪ ||

ಸುರಪಧನುಸು ಇಂದ್ರಜಾಲ
ತುರಗಯಾಗ ಯಕ್ಷವೈಸೆ
ಕೊರಳು ಬೆರಳು ಅಗ್ನಿ ಜಲದ ಸ್ತಂಭವಲ್ಲವ
ಅರಿವುತಿರ್ಪೆ ಮರುಳೆ ನೀನು
ಗಿರಿಯನಗುಳಿ ಇಲಿಯ ಹಿಡಿದ
ಪರಿಗಳೈಸೆ ಏನು ಸುಖವು ಹೇಳು ಸಾಧಕಾ || ೧ |

ಛಂದ ಗಣಿತ ಧಾತು ಕೋಶ
ಮುಂದೆ ಪಂಚಕಾವ್ಯ ಮಾಘ
ವೊಂದು ಉಳಿಯದಂತೆ ಕಲಿಯುತಿರ್ಪೆಯದರಿನಿಂ
ಒಂದು ಕಾಳು ನೆಲ್ಲಿಗಾಗಿ
ಮಂದರಾದ್ರಿಯನಿತು ಜಳ್ಳ
ತಂದು ತೂರುತಿರ್ಪ ನರನ ಮಾಳ್ಕೆ ಪಾಠಕ || ೨ ||

ಧರೆಯೊಳಖಿಳ ಮಂತ್ರಗಳನು
ಬರೆದು ಕಲಿಯುತಿರ್ಪೆ ನೀನು
ಹಿರಿಯ ಗುಡಿಯ ಕೆಡಹಿ ಮೊಳೆಯ ಪಡೆದ ಮಾಳ್ಕೆಯಿಂ
ಅರಿದು ಷಡಕ್ಷರಿಯ ವರನ
ಪರಮಮಂತ್ರವನ್ನು ಜಪಿಸೆ
ಹರುಷ ನಿಧಿಯ ಪಡೆದ ಮಾಳ್ಕೆ ಕೇಳು ಮಾನವ || ೩ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಎನಗೆ ದೊಡ್ಡಿತೆ ಧರೆಯ ಭೋಗವಸ್ಥಿರ Next