ಭೋಗಷಟ್ಪದಿ
ನಿನ್ನ ರೂಪಿನವರು ಬಂದು
ಎನ್ನ ಬಿಡದೆ ನೋಯಿಸಲವರ
ನಿನ್ನ ಹಾಗೆ ಕಾಂಬ ಭಕ್ತಿ ಎಂದಿಗಪ್ಪುದೋ || ಪ ||
ಬಂದ ಬಳಿಯ ಹೋದ ಬಳಿಯ
ನಿಂದ ಬಳಿಯ ನೆರೆದ ಬಳಿಯ
ಚೆಂದಗೆಡಿಸಿ ನುಡಿವುತಿರಲು ಚರನದೊರ್ವನು
ಇಂದುಧರನು ಮನವ ನೋಡ
ಲೆಂದು ಬೈದನೆಂದು ನಂಬಿ
ಕುಂದದಿರ್ಪ ಭಕ್ತಿ ಎನಗೆ ಎಂದಿಗಪ್ಪುದೋ || ೧ ||
ಇಂದುಧರನ ರೂಪಿನಿಂದ
ಬಂದು ಚರಣ ರಕ್ಷೆವೆರಸಿ
ನೊಂದಿತೆಂದು ಅಳುಕದನ್ನ ಕೆಡಹಿ ತುಳಿದೊಡೆ
ಕುಂದದವರು ಶಿವಸ್ವರೂಪ
ರೆಂದು ಭಾವಿಸುತ್ತ ಮನವು
ಚಂದವಳಿಯದಿರ್ಪ ಭಕ್ತಿಯೆಂದಿಗಪ್ಪುದೋ || ೨ ||
ಮಾರಹರನ ರೂಪಿನಿಂದ
ಚೋರರುಗಳು ಬಂದು ಕಟ್ಟಿ
ದಾರಿಯಲ್ಲಿ ಸುಲಿದುಕೊಳಲು ಇರ್ದುದಲ್ಲವ
ಮಾರವೈರಿ ತಾನೆ ಬಂದು
ಸೂರೆಗೊಂಡು ಹೋದನೆಂಬ
ಸಾರಮನದ ಭಕ್ತಿಯೆನಗೆ ಎಂದಿಗಪ್ಪುದೋ || ೩ ||
ಹರನ ರೂಪಿನಿಂದ ಹಗೆಯು
ತರುಬಿ ಬಂದು ಎನ್ನ ಹಿಡಿದು
ಇರಿದು ಬಿಡದೆ ಕೆಡಹಿ ಕಡಿದು ಕೊರ್ಚುತಿರ್ದೊಡೆ
ಅರಿದು ಅವರ ಕಂಡ ಬಳಿಕ
ಗುರು ಸ್ವರೂಪರೆಂದು ನಂಬಿ
ಅರಿಗಳೆನ್ನದಿರ್ಪ ಭಕ್ತಿಯೆಂದಿಗಪ್ಪುದೋ || ೪ ||
ಚರನು ಓರ್ವ ಬಂದು ಎನ್ನ
ಶಿರದ ಮೇಲೆ ಕೆರವುಗಾಲ್
ವರಸೆ ಶಿವ ಷಡಾಕ್ಷರಾಂಕ ಬಂದು ಕರುಣದಿ
ಚರಣ ಯುಗವನಿಟ್ಟನೆನ್ನ
ಶಿರದ ಮೇಲೆ ಎನುತ ನಂಬಿ
ಹರುಷಗೊಳುವ ಭಕ್ತಿಯೆನಗದೆಂದಿಗಪ್ಪುದೋ || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ