ಕುಸುಮಷಟ್ಪದಿ
ಮಾಯೆ ನೀನತಿ ಚೆಲುವೆ
ಕಾಯ ಮುನ್ನವೆ ಚೆಲುವು
ಹೇಯವಾಯಿತು ಒಳಗನರಿತ ಬಳಿಕ || ಪ ||
ನಿನ್ನ ಮುಖ ಚಂದ್ರನೊಲು
ನಿನ್ನಕ್ಷಿ ಕಮಲದಳ
ನಿನ್ನ ಕುಚ ಪೊಂಗಳಸದಂತೆ ಮಾಯೆ
ನಿನ್ನಂಗ ಕನಕಲತೆ
ನಿನ್ನಧರ ಬಿಂಬಫಲ
ನಿನ್ನ ವೀಕ್ಷಿಸಿ ಸೋಲದವರಾರಲೆ || ೧ |
ನಿನ್ನ ಮೃದುವಚನಕಂ
ನಿನ್ನ ದೈನ್ಯೂಕ್ತಿಗಂ
ನಿನ್ನ ಕಡೆಗಣ್ಣೋಟದಾ ಭಾವಕೆ
ನಿನ್ನ ನಸುಮುನಿಸಿಗಂ
ನಿನ್ನ ಚಾತುರ್ಯಕಂ
ನಿನ್ನ ಬೆಳುನಗೆಗೆ ಸೋಲದವರಾರು? || ೨ ||
ಅಣ್ಣ ತಮ್ಮನು ತಂದೆ
ಚೆನ್ನ ಪುತ್ರನು ಅಳಿಯ
ನಿನ್ನ ಮೋಹವು ಎಂಬ
ಉನ್ನತದ ಪಾಶದಲಿ
ತಿಣ್ಣನೇ ಬಿಗಿದಿರ್ವೆ ನುಸುಳ್ಳರಾರು || ೩ ||
ನಿನ್ನೊಳಗೆ ಕಾಲನಿಹ
ನಿನ್ನೊಳಗೆ ಕಾಮನಿಹ
ನಿನ್ನೊಳಗೆ ನೇಣು ಕತ್ತರಿಗಳಿಹವು
ನಿನ್ನೊಳಗೆ ವಿಷವಿಹುದು
ನಿನ್ನೊಳಗೆ ನರಕಗಳು
ಇನ್ನು ನಿನ್ನನು ಗೆಲುವರಾರು ಮಾಯೆ || ೪ ||
ಕಾಮ ಕಾಲಗಳಿಂ ನಿ
ರ್ನಾಮ ಮಾಡುವ ಮಾಯೆ
ಭೀಮನೆನಿಸುವ ಷಡಕ್ಷರಿಲಿಂಗವ
ನಾ ಮರೆಯಹೊಕ್ಕೆನ ನೆಲೆ
ಛೀ ಮಾರಿ ಹೋಗತ್ತ
ನೀ ಮುನ್ನ ದುಶ್ಚರಿತಳೆಂದರಿದೆನು || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ