ಕಣ್ಣಾರೆ ನಾ ಕಂಡೆ ಕನಸಿನ ಸುಖವ
|
|
ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ
ಕಣ್ಣಾರೆ ನಾ ಕಂಡೆ ಕನಸಿನ ಸುಖವ
ಉಣ್ಣದೂಟವನುಂಡು ಊರ ಸುಡುವುದ |ಪಲ್ಲವಿ|
ಮಾಣದಚ್ಚ ಜಲದೊಳೆಂದು ಆಣಿಯಾದ ಮುತ್ತು ಹುಟ್ಟಿ
ಕೋಣೆಯೆಂಟರೊಳಗೆ ತಾನೆ ತಿರುಗುವುದು
ಆಣಿಕಾರರು ಹಂಡು, ಆ ಮುತ್ತ ಬೆಲೆ ಮಾಡಿ,
ಜಾಣತನದಲ್ಲಿ ಕೊಂಡೊಯ್ದರದನು |೧|
ಇಂಬಪ್ಪ ಗಿರಿಯಲಿ ಕೊಂಭೆರಡನೆ ಕಂಡು
ಶಂಭುನಾರಿಯ ನೋಡಿ ಮಾತಾಡೆ
ಮುಂಬರಿದಾಡುವ ಮಾವತಿಗನ ಕೊಂದು
ಸಂಭ್ರಮಿಸಿ ಉಂಬ ಶಿವಶರಣರೆಲ್ಲರನು |೨|
ಮುಪ್ಪಿಲ್ಲದ ಸರ್ಪನೊಪ್ಪವಿಲ್ಲದೆ ಕೊಂದು
ಒಪ್ಪುವ ಆತ್ಮಕನ ನೋಟಕರ
ಉಪ್ಪರಿಗೆಯ ಮೇಲೆ ಉರಿವ ಲಿಂಗವನು ಕಂಡು
ಒಪ್ಪದ ಚೀಟಿ ಸುಟ್ಟುಹಿದ ಮಹಿಮರ |೩|
ಜಗಕೆ ಎಚ್ಚರುವಾಗಿ ಅಘಹರರೂಪಾಗಿ
ಅಗಣಿತವಹ ಘನಮಹಿಮರನು
ಬೆಗೆಗೊಳ್ಳದೆ ಭಾವೆನ್ನರ ಸಂಗವ
ನೊಗೆದು ಈಡಾಡುವ ಓಜೆವಂತರನು |೪|
ಮನಕ್ಕೆ ಗೋಚರವಾಗಿ ತನುಮನ ರೂಪಾಗಿ
ಅನುವಿನ ವಿವರವ ಬಲ್ಲವರ
ನೆನೆವರಿಗೆ ಸಿಲ್ಕಿ ನೇಮವ ಕೋರುವ
ಘನ ಚೆನ್ನಮಲ್ಲನೆಂಬಿನಿಯನನು |೫|
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”