Previous ನೀನು ರಕ್ಷಿಸಭವ ಕೊಟ್ಟು ಹುಟ್ಟಿ ಪಡೆಯಲಿಲ್ಲ Next

ನಾನು ಒಲಿದು ಫಲವದೇನು

ರಚನೆ: ಶ್ರೀ ಮುಪ್ಪಿನ ಷಡಕ್ಷರಿ


ನಾನು ಒಲಿದು ಫಲವದೇನು
ನೀನು ಒಲಿಯದನಕ ಶಿವನೆ
ಏನು ಮಾಡಿ ಫಲವದೇನು ಬಯಲ ಭ್ರಮೆಯದು || ಪ ||

ಜಪವ ಮಾಡಿ ಫಲವದೇನು
ತಪವ ಮಾಡಿ ಫಲವದೇನು
ಅಪರಿಮಿತದ ಶಾಸ್ತ್ರ ಪಠಿಸಿ ಫಲವದೇನಲೈ
ತ್ರಿಪುರವೈರಿ ತನ್ನ ತಾನೆ
ಸುಪಥದೋರಿ ಒಲಿಯದನಕ
ಉಪಮೆಯಿಂದ ಮಾಡೆ ತುದಿಗೆ ಕೆಟ್ಟು ಪೋಪುದು || ೧ ||

ಹೆಣ್ಣು ಬಿಟ್ಟು ಫಲವದೇನು
ಹೊನ್ನ ಬಿಟ್ಟು ಫಲವದೇನು
ಮಣ್ಣ ಬಿಟ್ಟು ನಿರಾಭಾರಿಯಾದಡೇನಲೈ
ಪನ್ನಣೇಂದ್ರಭರಣನೊಲಿದು
ತನ್ನ ಸುಪಥ ತೋರದನಕ
ಪರರ ನೋಡಿ ಮಾಡೆ ಕಡೆಗೆ ಕೆಟ್ಟು ಪೋಪುದು || ೨ ||

ಗಿರಿಗಳಲ್ಲಿ ಗವಿಗಳಲ್ಲಿ
ತರಗ ಸಲಿಸಿಕೊಂಡು ತನುವ
ಮರೆದು ಅಸ್ಥಿಮಾತ್ರವಿರಲು ಫಲವದೇನಲೈ
ಹರನು ತನ್ನ ತಾನೆ ಒಲಿದು
ಪರಮ ಸುಖವ ತೋರದಕನ
ಅನ್ಯರುಗಳ ನೋಡಿ ಮಾಡೆ ಕೆಟ್ಟು ಪೋಪುದು || ೩ ||

ಕೋಡುಗಲ್ಲಿ ತುದಿಯ ಮೇಲೆ
ನೀಡಿ ಕಾಲ ಗಗನಕಾಗಿ
ಕೊಡೆ ಉಗ್ರತಪವ ಮಾಡಿ ಫಲವದೇಲೈ
ರೂಢಿಗೀಶ ಕರುಣ ಹುಟ್ಟಿ
ನೋಡಿ ಒಲಿಯದನಕ ಪರರ
ನೋಡಿ ಮಾಡಲೆಲ್ಲ ಕಡೆಗೆ ಕೆಟ್ಟು ಪೋಪುದು || ೪ ||

ಮುನ್ನ ಮಾಡಿದವರ ಕಂಡು
ಇನ್ನು ನೋಡಿ ಮಾಡಿ ಬಳಲಿ
ಬನ್ನೆ ಬಿಡುತ ಇರಲು ಕಡೆಗೆ ಕೆಟ್ಟು ಪೋಪುದೈ
ತನ್ನ ತಾನೆ ಪಕ್ವವಾಗಿ
ತನ್ನ ತಾನೆ ಪಥಕೆ ಬರಲು
ಚನ್ನ ಷಡಕ್ಷರಿಯ ಲಿಂಗ ತಾನೆ ಒಲಿದನು || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ನೀನು ರಕ್ಷಿಸಭವ ಕೊಟ್ಟು ಹುಟ್ಟಿ ಪಡೆಯಲಿಲ್ಲ Next