ರಚನೆ: ಶ್ರೀಗುರು ಬಸವಾರ್ಯರು
ಇರುಳು ಹಗಲೆಯು ನಿನ್ನ ಧ್ಯಾನದಿ ಬಸವ
ತರಳ ನಾ ನಿನ್ನನು ನೆನೆಯುತ್ತಿದ್ದೆನು ಬಸವ || ಪ ||
ಪರುಷ ಮುಟ್ಟಿದ ಬಳಿಕ ವರುಷವೆ ಬಸವ?
ಪರಮ ನಾಮವು ನಿನ್ನ ನೆನೆದರೆ ಬಸವ
ಇರವು ಪರವಿನ ಗೊಡವೆ ಏಕವೊ ಬಸವ?
ಕರುಣಿಸಯ್ಯ ನಿನ್ನ ಕೃಪೆಯಿಂದ ಬಸವ || ೧ ||
ಜ್ಞಾತೃ ಜ್ಞೇಯವ ಮೀರಿ ನಿಂದನೆ ಬಸವ
ಮಾತೃವೆನಿಸಿದೆ ನಿನ್ನ ನೆನೆದರೆ ಬಸವ
ಸ್ತೋತ್ರ ಮಾಡಿದ ಬುಧಸಮೂಹಕೆ ಬಸವ
ಪಾತ್ರನಾದೆಯೋ ಆವ ಸ್ತೋತ್ರಕ್ಕೆ ಬಸವ || ೨ ||
ಅಪ್ರಮೇಯ ನೀನಾಗಿಯೆನ್ನನು ಬಸವ
ಅಪ್ರಮೇಯನನು ಮಾಡಿಕೊಂಡೆಯೋ ಬಸವ
ಈ ಪ್ರಕಾರವ ಬಲ್ಲವರಾರೋ ಬಸವ
ಅಪ್ರಿಯದಿ ತಾ ನುಡಿವರಲ್ಲದೆ ಬಸವ || ೩ ||
ನಿನ್ನ ನಂಬಿದೆ ನೀನು ಬಲ್ಲೆಯೊ ಬಸವ
ನಿನ್ನ ಸಾರಿದೆ ನಿನ್ನ ಪದವನು ಬಸವ
ನಿನ್ನನಲ್ಲದೆ ಅನ್ಯವರಿಯೆನೊ ಬಸವ
ನಿನ್ನ ನೃತ್ಯನು ನಾನಾದೆನೋ ಬಸವ || ೪ ||
ಕಾಡದೆನ್ನನು ಸಲಹಿ ನೋಡು ಬಸವ
ಬೇಡಿಕೊಂಬೆನು ನಿಮ್ಮ ನಾನು ಬಸವ
ಪಾಡು ಪಂಥವು ಎನ್ನೊಳೇಕೆ ಬಸವ
ಬೇಡ ಸಲಹು ನಿನ್ನ ಲೆಂಕ ಬಸವ || ೫ ||
ಭಕ್ತ ಮುಕ್ಕೋಟ್ಯಾದಿ ನಿನ್ನೊಳಗೆ ಬಸವ
ನಿತ್ಯ ಪ್ರಸಾದಿ ಪ್ರಾಣಲಿಂಗಿಯು ಬಸವ
ಸತ್ಯ ಶರಣನು ಐಕ್ಯ ನೀನೆಯೊ ಬಸವ
ಮುಕ್ತಿ ಸ್ಥಲಗಳು ನಿನ್ನೊಳಿದೆಕೋ ಬಸವ || ೬ ||
ಓಂಕಾರ ಪ್ರಣಮದಿ ಮೂರು ಸಾವಿರ ಬಸವ
ಸಾಕಾರ ಪ್ರಣಮದಿ ಆರು ಸಾವಿರ ಬಸವ
ವಕಾರ ಪ್ರಣಮದಿ ಹತ್ತು ಸಾವಿರ ಬಸವ
ಏಕಮೂತಿಯ ತಿಳಿಯ ಬಾರದು ಬಸವ || ೭ ||
ಲಿಂಗ ಪ್ರಣಮವ ತಿಳಿದರಾರೈ ಬಸವ
ನಿನ್ನ ಮಹಿಮೆಯನರಿವರಾರೈ ಬಸವ
ನಿನ್ನ ಬಗೆಯನು ಶಿವನು ಬಲ್ಲನು ಬಸವ
ನೀನೆ ಬಲ್ಲೆಯೊ ಶಿವನ ಮಹಿಮೆಯ ಬಸವ || ೮ ||
ಶೂನ್ಯ ಶೂನ್ಯಾತೀತನಾದೆಯೊ ಬಸವ
ಶೂನ್ಯಲಿಂಗವ ಬೆರೆದು ನಿಂದೆಯೊ ಬಸವ
ಮಾನ್ಯ ಗುರುಬಸವೇಶನನ್ನು ಬಸವ
ನಿನ್ನನು ನೆನೆಯುತಿದ್ದೆನು ಬಸವ || ೯ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”