Previous ಎನ್ನ ಬರಿಸದಿರು ಮಾಯೆ ನೀನತಿ ಚೆಲುವೆ Next

ಕೇಳಕ್ಕ

ಕುಸುಮಷಟ್ಪದಿ

ನಮ್ಮ ಮನೆ ಕೇಳಕ್ಕ
ಬ್ರಹ್ಮ ಬಂದೆಡೆಗೊಂಡು
ನಮ್ಮ ಮನೆ ಸುತಬಂಧುಗಳ ಕೊಂದಿತು || ಪ ||

ಏಳು ಮಕ್ಕಳ ಕೊಂದು
ಏಳು ತೊತ್ತಿರ ಕೊಂದು
ಮೇಲೈವರಣ್ಣಗಳ ಕೊಂದಿತಕ್ಕ
ಕಾಳಿನೊಳಗಿರುತಿರ್ಪ
ಜಾಳಿಗೆಲ್ಲವ ತಿಂತು
ಬಾಳಲೀಸದು ಮನೆಯನೆಲ್ಲರಂತೆ || ೧ |

ಮೂರು ಕರುಗಳ ಕೊಂದು
ಮೂರು ಪಶುಗಳ ಕೊಂದು
ಮೂರೈದು ಕೋಣಗಳ ಕೊಂದಿತಕ್ಕ
ಮೂರು ಸೊಸೆಯರ ಕೊಂದು
ಮೂರಳಿಯರನು ಕೊಂದು
ಕೇರಿಕೇರಿಗಳಲ್ಲಿ ಹರಿಯುತಿದೆಕೊ || ೨ ||

ಜಡೆಗಳನ್ನು ಕೆದರಿ ತಾ
ಹಿಡಿದು ಶೂಲದಿ ಪೆಣನ
ಬಿಡದೆ ಮೈಯೊಳು ಹಾವ ತೊಡರಿಸಿಹುದು
ಕಡಿದ ತಲೆ ಕರದೊಳಗೆ
ಮಡಿದ ತಲೆ ಕೊರಳೊಳಗೆ
ಬಿಡದೆನ್ನನಂಜಿಸುತ ಬರುತಲಿದೆಕೊ || ೩ ||

ಇರುಳು ಸುಳಿಯಲಿಕಂಜಿ
ಪುರಮೂರು ಹಾಳಾಗಿ
ನೆರೆವ ಜನರುಗಳೆಲ್ಲ ಓಡಿತಕ್ಕ
ಪುರಪುರದ ಮಧ್ಯದಲ್ಲಿ
ಉರಿವುತ್ತ ತಿರುಗುತಿದೆ
ಇರುಳು ನಾ ಕಣ್ಮುಚ್ಚಲಮ್ಮೆ ನವ್ವ || ೪ ||

ಇನ್ನೇನನೆನ್ನುವೆನು
ಬೆನ್ನ ಬಿಡದಕ್ಕಯ್ಯ
ತನ್ನ ನಗಲುವಳೆಂದು ಹಿಂದುಮುಂದು
ಎನ್ನ ಕಾದಿರುತಿಹುದು
ತನ್ನ ಹೆಸರೇನೆನಲು
ಚೆನ್ನಿಗ ಷಡಕ್ಷರಿಯ ಲಿಂಗವಂತ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಎನ್ನ ಬರಿಸದಿರು ಮಾಯೆ ನೀನತಿ ಚೆಲುವೆ Next