Previous ಎಲೆ ಆತ್ಮನೆ ಎನಗೆ ಭೋಗಭಾಗ್ಯ ಬೇಡ Next

ಡಿಂಭದೊಳಗೆ ಒಂದು ಪ್ರಾಣ

ರಚನೆ: ಶ್ರೀ ಮುಪ್ಪಿನ ಷಡಕ್ಷರಿ


ಡಿಂಭದೊಳಗೆ ಒಂದು ಪ್ರಾಣ
ಕಂಭಸೂತ್ರ ಬೊಂಬೆಯಂತೆ
ಎಂದಿಗಾದರೊಂದು ದಿನವು ಸಾವು ತಪ್ಪದು || ಪ ||

ಹುಟ್ಟುತೇನು ತರಲು ಇಲ್ಲ
ಬಿಟ್ಟುತೇನು ಒಯ್ಯಲಿಲ್ಲ
ಸುಟ್ಟ ಸುಣ್ಣದರಳಿನಂತೆ ಆಯ್ತು ದೇಹವು
ಹೊಟ್ಟೆ ಬಹಳ ಕೆಟ್ಟುದೆಂದು ಎಷ್ಟು ಕಷ್ಟಪಟ್ಟೆ ಪ್ರಾಣ
ಬಿಟ್ಟು ಹೋಗುವಾಗ ಒಂದು ಬಟ್ಟೆಯಿಲ್ಲವು || ೧ ||

ಹೊನ್ನು ಹೆಣ್ಣು ಮಣ್ಣು ಮೂರು
ತನ್ನೊಳಿರ್ದು ಉಣ್ಣಲಿಲ್ಲ
ಅಣ್ಣ ತಮ್ಮ ತಾಯಿ-ತಂದೆ ಬಗೆಯಲಿಲ್ಲವು
ಅನ್ನ ವಸ್ತ್ರ ಭೋಗಿಯಾಗಿ
ತನ್ನ ಸುಖವನರಿಯಲಿಲ್ಲ
ಮಣ್ಣುಪಾಲಾದ ಮೇಲೆ ಯಾರಿಗಾಯಿತು || ೨ ||

ಹತ್ತು ಎಂಟು ಲಕ್ಷಗಳಿಸಿ
ಮತ್ತೆ ಸಾಲದೆಂದು ಪರರ
ಸೊತ್ತಿಗಾಗಿ ಆಶೆ ಮಾಡಿ ನ್ಯಾಯ ಮಾಡುವ
ಬಿತ್ತಿ ಬೆಳೆದು ಉಂಡೆನೆಂಬ
ವ್ಯರ್ಥ ಚಿಂತೆ ಮಾಡದಿರೆಲೊ
ಸತ್ತು ಹೋದ ಮೇಲೆ ನಿನ್ನ ಅರ್ಥ ದಾರಿಗೆ || ೩ ||

ಬೆಳ್ಳಿ ಬಂಗಾರಿಟ್ಟುಕೊಂಡು
ಒಳ್ಳೆ ವಸ್ತ್ರ ತೊಟ್ಟುಕೊಂಡು
ಒಳ್ಳೆ ಚಲುವ ಬೊಂಬೆಯಂತೆ ಆಡಿಹೋದೆ
ಹಳ್ಳ ಹರಿದ ಮೇಲೆ ನೀರ
ಗುಳ್ಳಿಯುರುಳಿ ಹೋದ ತೆರದಿ
ಸುಳ್ಳುರೂಪು ಸಂಸ್ಕೃತಿಯನ್ನು ನೋಡಿರಕ್ಕಟ || ೪ ||

ಸತ್ಯನೆನಿಸಿಕೊಂಡು ಜನರ
ತಥ್ಯವಾಕ್ಯದಲ್ಲಿ ನೀನು
ಮುಕ್ತಿಯಾದಮೇಲೆ ನಿನಗೆ ಸ್ತೋತ್ರ ಮಾಳ್ವರು
ನಿತ್ಯ ಷಡಕ್ಷರಿಯ ಲಿಂಗ ತೊತ್ತು ಆಗಿ ಭಜಿಸು ನಿನಗೆ
ಉತ್ತಮತ್ವಪದವಿ ದೊರಕಿ ಸುಖಿವೆ ಸಂತತಂ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಎಲೆ ಆತ್ಮನೆ ಎನಗೆ ಭೋಗಭಾಗ್ಯ ಬೇಡ Next