Previous ಮನದ ಬಲುಮೆ ಎಂದಿಗಪ್ಪುದೋ ನಿಮ್ಮ ನಿಜಪದ Next

ಕಿವಿಯನೊಡ್ಡಿ ಕೇಳಲಾಗದು

ಭೋಗಷಟ್ಪದಿ

ಅಂದಿನವರಿಗಿಂದಿನವರು
ಹೊಂದಿ ಹೋಲಲರಿಯರೆಂಬ
ಕುಂದುನುಡಿಯ ಕಿವಿಯನೊಡ್ಡಿ ಕೇಳಲಾಗದು || ಪ ||

ಕಡಿದ ಶಿರವ ಪಡೆದರವರು
ಮಡಿದ ನರನ ಪಡೆದರವರು
ಜಡಜಸಖನ ತಡೆದರವರು ಇಂದಿನವರುವೆ
ಕಡಿದ ಶಿರವ ಜಡಜಸಖನ
ಪಡೆಯ ತಡೆಯಲಾರರೆಂಬ
ಜಡರ ನುಡಿಯ ಕಿವಿಯನೊಡ್ಡಿ ಕೇಳಬಾರದು || ೧ |

ಸುಟ್ಟಬೀಜ ಬೆಳೆದರವರು
ಕೆಟ್ಟ ಕಣ್ಣ ಪಡೆದರವರು
ನೆಟ್ಟಕೊರಡ ಚಿಗಿತರವರು ಇಂದಿನವರುವೆ
ಸುಟ್ಟ ಕೆಟ್ಟ ನೆಟ್ಟ ಕೊರಡು
ದೃಷ್ಟವಾಗದವರಿಗೆಂಬ
ಭ್ರಷ್ಟನುಡಿಯ ಕಿವಿಯನೊಡ್ಡಿ ಕೇಳಲಾಗದು || ೨ ||

ತನುವ ಕೊಟ್ಟರಂದಿನವರು
ಧನವ ಕೊಟ್ಟ ರಂದಿನವರು
ವನಿತೆಯರನು ಕೊಟ್ಟರಂದು ಇಂದಿನವರುವೆ.
ತನುವ ಧನವ ವನಿತೆಯರನು
ಇನಿತನೀಯಲಾರರೆಂಬ
ಬಿನುಗುನುಡಿಯ ಕಿವಿಯನೊಡ್ಡಿ ಕೇಳಲಾಗದು || ೩ ||

ತಲೆಯ ಕೊಟ್ಟರಂದಿನವರು
ಹೊಳೆಯ ತಡೆದರಂದಿನವರು
ಚಲುವ ಮಗಳ ಮುಡಿಯ ಕೊಟ್ಟರಿಂದಿನವರುವೆ
ತಲೆಯ ಹೊಳೆಯ ಮಗಳ ಮುಡಿಯ
ಒಲಿದು ತೋರಿ ಕೊಡರು ಎಂಬ
ಹೊಲೆಯ ನುಡಿಯ ಕಿವಿಯನೊಡ್ಡಿ ಕೇಳಲಾಗದು || ೪ ||

ಅಂದಿಗೊಬ್ಬ ಶಿವನು ಮೇಣು
ಇಂದಿಗೊಬ್ಬ ಶಿವನದುಂಟು
ಎಂದು ನುಡಿದ ಪಾತಕರ್ಗೆ ನರಕ ತಪ್ಪದು
ಅಂದಿನವರು ಇಂದಿನವರು
ಎಂದು ನುಡಿಯಬೇಡ ನಿನಗೆ
ತಂದೆ ಷಡಕ್ಷರಿಯ ಲಿಂಗ ಕುಂದದೊಲಿವನು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಮನದ ಬಲುಮೆ ಎಂದಿಗಪ್ಪುದೋ ನಿಮ್ಮ ನಿಜಪದ Next