ಕುಸುಮಷಟ್ಪದಿ
ಧರೆಯತ್ತ ಎನ್ನುವನು
ಬರಿಸದಿರು ಸದ್ಗುರುವೆ
ಧರೆಯ ಪಾಪದೊಳು ನಾ ಜನಿಸಲಾರೆ || ಪ ||
ಹುಸಿ ಕಳವು ಡಂಭಕವು
ನುಸುಳು ಆರಡಿ ತಳ್ಳಿ
ಹಿಸುಣಹೀನ ಅಪಹಾಸ್ಯ ಶಬ್ದಗಳು
ಕಿಸುಕುಳವು ಕೊರಚಾಟ
ವಿಷಮ ವಿಗಡವು ಕರುಬು
ಹೊಸಹುರುಡು ಜಾರರಾ ಜನ್ಮಾಲಯ || ೧ |
ನಿರುದಯವು ನಿಷ್ಠುರವು
ದುರುಳತ್ವ ಢಾಳಕವು
ಪರಬಂಧಕವು ಡಂಭವಪವಾದವು
ನೆರಚಂಡಿತನ ಪೊಲಬು
ಪರಧನದ ವಂಚನೆಯು
ಪರರ ಕೆಡಿಸುವ ಸಿದ್ದಿಗಳು ಮಂತ್ರದಾ || ೨ ||
ಹರನರ್ಚಕರು ಅಲ್ಪ
ಪರನಿಂದಕರು ಬಹಳ
ಗುರುಭಕ್ತರಲ್ಪ ಗರುವಿಗಳು ಬಹಳ
ಹರಶ್ರುತಿಯ ಬಿಟ್ಟು ತಾ
ನರಸ್ತುತಿಯ ಲಾಲಿಪರು
ನಿರಯದಾಲಯವಾಗಿ ತೋರುತಿಹರು || ೩ ||
ಪತಿವ್ರತೆಯರಿಲ್ಲ ಪರ
ಪತಿಮುಖಿಯರಿರುತಿಹರು
ಜಿತಕಾಮರಿಲ್ಲ ಅತಿಕಾಮರಿಹರು
ವ್ರತನೇಮಗಳು ಇಲ್ಲ
ಕೃತಕಿಗಳು ಘನವಯ್ಯ
ಕ್ಷಿತಿಯು ಅವಗುಣಿಗಳಿಗೆ ತವರುಮನೆಯು || ೪ ||
ಇಲ್ಲವೆನಬಾರದಲೆ
ಇಲ್ಲುಂಟು ಧರ್ಮಿಗಳು
ಕಲ್ಲೊಳಗೆ ಅಡಗಿರ್ಪ ಪರುಷದಂತೆ
ಖುಲ್ಲ ಮಾನವ ನಿನಗೆ
ಒಳ್ಳಿದರು ಕಾಣಿಸರು
ಒಲ್ಲೆ ಮರ್ತ್ಯವ ಷಡಕ್ಷರಿಲಿಂಗವೆ || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ