ಭೋಗಷಟ್ಪದಿ
ಕಾಯ ಮಾಯ ಜಾಯವೆಂದು
ಕಾಯಮೋಹವನ್ನು ಮರೆದು
ಮಾಯವೈರಿ ಶಿವನ ನೆನೆವುದೆಂದಿಗಪ್ಪುದೋ || ಪ ||
ಜಡವು ನಿದ್ರೆ ಆಕಳಿಕೆಯು
ಬಿಡದೆ ಹಸಿವು ತೃಷೆಯು ವ್ಯಸನ
ಒಡನೆ ಇದಕೆ ಸುಖವು ದುಃಖ ತಾಗುತಿರ್ಪುದು
ಒಡಲ ಮೆಚ್ಚಿ ಶಿವನ ಸುಖವ
ಕೆಡಿಸಿಕೊಂಬ ತನುವನಿದನು
ಒಡಕು ಓಡಿನಂತೆ ಕಾಂಬುದೊಂದಿಗಪ್ಪುದೋ || ೧ |
ಹಗಲು ಇರುಳು ಓಗರವನು
ಮಿಗಿಲು ತುಂಬಿ ಸುರಿವುತಿಹುದು
ತೊಗಲಚೀಲ ಶುಕ್ಲದೊರತ ಕರುಳುಜಾಳಿಗೆ
ಅಘದ ಬೀಡು ಮುಕುತಿಗೇಡು
ಜಗದಿ ಜನಿಸಿ ಕೆಡುವ ತನುವ
ರಗಟೆಗಿಂತ ಕಡೆಯ ಕಾಂಬುದೆಂದಿಗಪುದೋ || ೨ ||
ಬಿರಿತಕಿವಿಗಳಲ್ಲಿ ಗುಗ್ಗೆ
ವೊರತೆ ಕಣ್ಣಿನಲ್ಲಿ ಜಾರು
ಬರಿಯ ಶ್ಲೇಷ್ಮ ಉಗಳು ಬಾಯ್ ಗೊಣ್ಣೆ ಮೂಗಿನ
ಸುರಿವ ತನುವ ಮೆಚ್ಚಿ ಶಿವನ
ಮರೆದು ಕೆಡುವ ಶರಿರವಿದನು
ಕೆರವಿಗಿಂತ ಕಡೆಯ ಕಾಂಬುದಂದಿಗಪ್ಪುದೋ || ೩ ||
ಚಳಿಯ ತಾಳಲಾರದೊಮ್ಮೆ
ಝಳವ ತಾಳಲಾರದೊಮ್ಮೆ
ಒಲಿದು ರಕ್ಷಣೆಯನು ಮಾಡಲೇನ ಕೊಡುವದು
ಗಳಿಸಿ ಪಾಪವನ್ನು ಯಮನ
ಬಳಿಗೆ ಒಯ್ದ ತನುವ ನಾಯ
ಹಳಗಿಗಿಂದ ಕಡೆಯ ಕಾಂಬುದೆಂದಿಗಪ್ಪುದೋ || ೪ ||
ಅಂಗವಿರಲಿ ಇರ್ದೊಡೇನು
ಅಂಗದಿಚ್ಛೆಗಾದರೊಲಿದು
ಮಂಗಳಾತ್ಮ ಷಡಕ್ಷರಿಯ ಲಿಂಗ ನೆನವನು
ಹಿಂಗದಂತ ಹೃದಯದಲ್ಲಿ
ಸಂಗಿಸುತ್ತಲಿರಲು ಭವದ
ಭಂಗವಳಿದು ನಿತ್ಯಪದಕೆ ಕರ್ತನಪ್ಪನು || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ