ಎನ್ನ ಕರದೊಳಗಿದ್ದು ಎನ್ನೊಳು ನುಡಿಯನು ಕೇಳು ಸಖಿಯ
ತನ್ನ ನಾವು ಏನು ಬೇಡಿದವವ್ವ ಕೇಳು ಸಖಿಯೇ || ಪ ||
ಸಾಲೋಕ್ಯ ಮೊದಲಾದ ನಾಲ್ಕು ಪದಂಗಳು ಕೇಳು ಸಖಿಯೆ
ಮೇಲೆ ನಮ್ಮವರ ಬಾಗಿಲ ಕಾಯ್ದಿರ್ಪವು ಕೇಳು ಸಖಿಯ
ಲೀಲೆಯಿಂದಲವನು ಬೇಡುವಳಲ್ಲ ತನ್ನನು ಕೇಳು ಸಖಿಯೆ
ಭಾಳಾಕ್ಷ ನಮ್ಮೊಳು ನುಡಿಯದನ ಕೇಳವ್ವ ಕೇಳು ಸಖಿಯೆ || ೧ |
ಅಣಿಮಾದಿ ಅಷ್ಟಸಿದ್ಧಿಗಳ ನಮ್ಮವರೆಲ್ಲ ಕೇಳು ಸಖಿಯೆ
ತೃಣಮಾತ್ರ ಲೆಕ್ಕಿಸಿ ಬಗೆಯರು ಮನದೊಳು ಕೇಳು ಸಖಿಯೆ
ಅಣಿಮಾದಿ ಸಿದ್ಧಿಗಳನ್ನು ಬೇಡಿದವ ತನ್ನ ಕೇಳು ಸಖಿಯೆ
ತ್ರಿಣಯ ತಾ ನಮ್ಮೊಳು ನುಡಿಯದೇಕವ್ವ ಕೇಳು ಸಖಿಯೆ || ೨ ||
ಅರವತ್ತು ನಾಲ್ಕು ವಿದ್ಯೆಯು ನಮ್ಮ ಶರಣ ಕೇಳು ಸಖಿಯೆ
ಚರಣ ರಕ್ಷೆಗೆ ಸರಿಯ ಬಾರದವೆಲ್ಲವು ಕೇಳು ಸಖಿಯೆ
ಅರವತ್ತು ನಾಲ್ಕು ವಿದ್ಯೆಯ ಬೇಡಿದವ ತನ್ನ ಕೇಳು ಸಖಿಯೆ
ಹರನು ತಾ ನಮ್ಮೊಳು ನುಡಿಯದಿರುದೇಕವ್ವ ಕೇಳು ಸಖಿಯೆ || ೩ ||
ಹೊಟ್ಟೆಗನ್ನವನಿಕ್ಕಿದಳು ನಮ್ಮ ಪಿಟ್ಟವ್ವೆ ಕೇಳು ಸಖಿಯೆ
ಉಟ್ಟುಕೊಂಬಡೆ ನಮ್ಮ ದಾಸಯ್ಯ ಬಟ್ಟೆ ಕೊಟ್ಟನು ಕೇಳು ಸಖಿಯೆ
ಕೊಟ್ಟರು ತನಗೆ ಬೇಡಿದುದನ್ನೆಲ್ಲ ಶರಣರು ಕೇಳು ಸಖಿಯೆ
ಕೊಟ್ಟನೋ ಹರ ನಮ್ಮವರಿಗೆ ನುಡಿಯನು ಕೇಳು ಸಖಿಯೆ || ೪ ||
ಆದವರನು ಮರೆದನು ತನ್ನೊಳು ಕೇಳು ಸಖಿಯೆ
ಭೇದಿಸಿ ತನ್ನೊಳಗಿಲ್ಲದೆ ಕೇಳು ಸಖಿಯೆ
ನಾದಮಯನು ಶಿವಷಡಕ್ಷರಿಲಿಂಗವು ಕೇಳು ಸಖಿಯೆ
ವೇಧಿಸಿ ನಮ್ಮೊಳು ನುಡಿಯನದೇಕವ್ವ ಕೇಳು ಸಖಿಯೆ || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ