ಸಂಪಿಗೆ ಹೂವಿನ ಕಂಬವು
ಸೊಂಪಿನ ಪಂಕಜದಿಮೆಸೆವ ತೊಲೆಗಳು ಮೆರೆವಾ
ಸೊಂಪಿನ ಮನೆಯೊಳು ಫಣಿಪತಿ
ಜೊಂಪಿನ ಕುಂಡಲನ ನೆನೆವುತಾನೆಂದಿಹನೋ || ಪ ||
ಜಾತಿ ಸುಪಾಟಲ ಕದಂಬ
ಕೇತಕಿ ಸೆಳೆದೊಲೆಯು ಜಂತೆ ಚೂತದ ತಳಿರಂ
ನೂತನ ಕಂಪಿನ ಮನೆಯೊಳ್
ಭೂತೇಶನ ನೆನೆದು ಸುಖಿಸುತಾನೆಂದಿಹೆನೋ || ೨ ||
ವರ ಕಸ್ತುರಿ ನೆಲಗಟ್ಟಂ
ನರುಗಂಪಿನ ಪುನುಗು ಭಿತ್ತಿ ಕರ್ಪುರದೊಲೆಯಂ
ಕರ ರಚಿಸಿದ ಕರುಮಾಡದಿ
ಗಿರಿಜಾತೆಯ ಪತಿಯ ನೆನೆವುತಾನೆಂದಿಹನೋ || ೩ ||
ಬೆಳ್ದಿಂಗಳ ಭಿತ್ತಿಗಳಿಂ
ಖದ್ಯೋತನ ಕಂಭವರ್ಧಚಂದ್ರನ ತೊಲೆಯಿಂ
ಬಳ್ದೈಸಿದ ಮಂಟಪದೊ
ಳದ್ರಿಜೆಯ ಕಾಂತನ ನೆನೆವುತಾನೆಂದಿಹನೋ || ೪ ||
ಬಳಸಿದ ರತ್ನದ ಗಿರಿಯೊಳ್
ಥಳಥಳಿಸುವ ವಜ್ರ ಶೃಂಗ ಶೈಲದ ತುದಿಯೊಳ್
ಎಳೆ ಮುತ್ತಿನ ಮಂಟಪದೊ
ಳಳಿವಿಲ್ಲದ ಶಿವನ ನೆನೆವುತಾನೆ೦ದಿಹನೋ || ೫ ||
ತಪ್ತ ಸುಕಾಂಚನ ಪ್ರಭೆಯಂ
ತೊಪ್ಪುವ ಸದ್ಭೂಮಿಯಲ್ಲಿ ಮಿಂಚಿನ ಮನೆಯೊಳ್
ತಪ್ಪದೆ ಬೆಳಗಿನ ಮಂಚದಿ
ದರ್ಪಕ ಮರ್ದನನ ನೆನೆವುತಾನೆಂದಿಹೆನೋ || ೬ ||
ಶಶಿಕಾಂತದ ನೆಲೆಗಟ್ಟಂ
ಪೊಸ ಪವಳದ ಕಂಬ ಪೊಳೆವ ನೀಲದ ತೊಲೆಯಿಂ
ಹಸನಾದ ಹರ್ಮ್ಯದೊಳಗಾ
ಶಶಿಧರನಂ ನೆನೆದು ಸುಖಿಸುತ್ತಾನೆಂದಿಹೆನೋ || ೭ ||
ತಿಂಗಳು ಗಂಗೆಯ ಸೂಡಿದ
ಮಂಗಳಮಯ ಭಸಿತಲಸಿತ ಒಪ್ಪುತ ಮೆರವಾ
ಅಂಗದ ಚಲುವ ಷಡಕ್ಷರ
ಲಿಂಗವ ನೆರೆದಪ್ಪಿ ಅಗಲದಾನೆಂದಿಹನೋ || ೮ ||
ಈ ಶಿವಯೋಗಾಷ್ಟಕಮಂ
ಬೇಸರಿಸದೆ ಬರೆದು ಓದಿ ಹೇಳಿದವರ್ಗಂ
ಈಶನು ತನ್ನಯ ಪುರದೊ
ಳ್ಭಾಸುರ ಗಣಪದವನಿತ್ತು ರಕ್ಷಿಪನೋಲವಿಂ || ೯ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ