ದೇವತ್ವವಾವುದು
ದೇವತ್ವವೆಂಬುದದಾವುದೆಂದರಿಯರು ಕೇಳು ಮನವೆ
ಭಾವದೊಳು ಲಿಂಗ ನೆಲಸಿರೆ ದೇವತ್ವವಪ್ಪುದು ಕೇಳು ಮನವೆ || ಪ ||
ಉರಿವ ಕಿಚ್ಚನೆ ಹೊಕ್ಕು ಬೇಯದೆ ಹೊರಟರೆ ಕೇಳು ಮನವೆ
ನರರುಗಳದನು ದೇವತ್ವವೆಂದಂಬರು ಕೇಳು ಮನವೆ
ಭರದಿಂದ ಬಂದು ಹೊಳೆಯ ಮೇಲೆ ನಡೆದರೆ ಕೇಳು ಮನವೆ
ಅರೆರೆ ಅವರಾಚರಿಸಿದುದೇ ದೇವತ್ವವೆಂಬರು ಕೇಳು ಮನವೆ || ೧ |
ಚಿತ್ತದೊಳಿಹ ಮಾತು ಹೇಳಲು ಮರ್ತ್ಯರು ಕೇಳು ಮನವೆ
ಸತ್ಯವಿದತಿಶಯ ದೇವತ್ವವೆಂಬರು ಕೇಳು ಮನವೆ
ಹತ್ತಿ ಗಗನದಲ್ಲಿ ನಡೆದರೆ ಧರೆಯೊಳು ಕೇಳು ಮನವೆ
ಉತ್ತರೋತ್ತರ ದೇವತ್ವವೆಂಬರು ಕೇಳು ಮನವೆ || ೨ ||
ದೂರದೃಷ್ಟಿ ದೂರಶ್ರವಣಗಳಿಂದಲಿ ಕೇಳು ಮನವೆ
ಸಾರಿ ದೃಷ್ಟನ ಹಳೇ ದೇವತ್ವವೆಂಬರು ಕೇಳು ಮನವೆ
ಆರೈವ ಮನದಿ ಷಡಕ್ಷರಲಿಂಗವ ಕೇಳು ಮನವೆ
ಬೇರಿಲ್ಲ ದೊಡಗೂಡಬಲ್ಲರೆ ದೇವತ್ವ ಕೇಳು ಮನವೆ || ೩ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ