Previous ಕರುಣಿ ಎಂತಹನು ಎಂದಿಗಹುದೋ Next

ನರರಿಗೆಂತಹುದು

ಭಾಮಿನಿಷಟ್ಪದಿ

ಒಲಿದ ಲಲನೆಯನಗಲುವದು ತಾ
ಒಲಿದು ಲಿಂಗದಿ ಮನವನಿಟ್ಟರೆ
ಚಲಿಸದದು ಶಿವನಂಶಕಲ್ಲದೆ ನರರಿಗೆಂತಹುದು || ಪ ||

ಮುನಿದ ನಲ್ಲಗೆ ಲಲ್ಲೆಗರದತಿ
ಬಿನದದಿಂದಲಿ ತೋರಕುಚಗಳ
ಇನಿಯನೆದೆಯೊಳು ಸಾರ್ಚಿಯಧರವ ಜಿ.ಯೊಳಗಿರಿಸಿ
ಮುನಿಸು ತಿಳಿಯದಡೆನ್ನ ಕೊಲ್ಲೆಂ
ದೆನುತ ಮುದ್ದಿಸಿ ದೈನ್ಯಗರೆವಳ
ಮನದಿ ನೆನೆಯದೆ ಇರ್ಪುದದು ತಾ ನರರಿಗೆಂತಹುದು || ೧ |

ಒಲಿದ ಪುರುಷನ ಸಲುಗೆಯಿಂದಲಿ
ಎಳೆದು ಮಂಚದ ಮೇಲೆ ಮಲಗಿಸಿ
ಬಲುಹಿನಿಂ ತಾಂಬೂಲ ಗುಟುಕನು ಕೊಟ್ಟು ಬಿಗಿದಪ್ಪಿ
ನಲಿದು ಅಧರವ ಸವಿದು ಸೊಗಸಿಂ
ಬಳಲು ಗಂಗಳ ಮುಚ್ಚಿ ತೆರೆವಳ
ನುಳಿಪುದದು! ಶಿವನಂಶಕಲ್ಲದೆ ನರರಿಗೆಂತಹುದು || ೨ ||

ಕುರುಳು ಕುಣಿವುತ ಮುತ್ತಿನೋಲೆಯ
ಮಿರುಗು ಹೊಳೆವುತ ಕೊರಳ ಮುತ್ತಿನ
ಸರವು ಕಲಕುತ ತೋರ ಕುಚಯುಗವದರುತಿರೆ ಬಳಿಕ
ಸೆರಗಿನಿಂದಲಿ ಬೆಮತ ನಲ್ಲನ
ಒರಸಿ ಮುಖವನು ಮರಳಿ ನೆರೆವಳ
ತೊರೆವುದದು ಶಿವನಂಶಕಲ್ಲದೆ ನರರಿಗೆಂತಹುದು || ೩ ||

ತೊಡೆಗಳದರುತ ನಡವು ಬಳಕುತ
ಮುಡಿಯು ಕುಣಿಯುತ ಸಡಲಿ ಬೈತಲೆ
ಒಡನೆ ಗಂಟಿಕ್ಕಿರಲು ತಿಲಕವು ಬೆಮರಿನಿಂದಿಳಿಯ
ಸಡಿಲೆ ಮುತ್ತಿನ ಬೊಟ್ಟು ಪಣೆಯೊಳು!!
ಮುಡಿದ ಕುಸುಮದ ಭಾವದವಳನು
ಬಿಡುವುದದು ಶಿವನಂಶಕಲ್ಲದೆ ನರರಿಗೆಂತಹುದು || ೪ ||

ಸುರತದಂತ್ಯದಿ ಬಳಲಿದಾತನ
ನೊರಗಿಸುತ ಕುಚಯುಗಳ ಮಧ್ಯದಿ
ಪರವಶದಿ ಮರೆದಿರುವ ಚೆಲುವೆಯ ಸೊಗಸನಗಲುವರೆ
ಪರಕೆ ಪರತರ ಶಿವ ಷಡಕ್ಷರ
ಪರಮ ಲಿಂಗದಿ ಮನವು ಸಿಲ್ಕಿರೆ?
ಹೊರಗೆ ಮರೆದಿಹ ಶರಣಗಲ್ಲದೆ ನರರಿಗೆಂತಹುದು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಕರುಣಿ ಎಂತಹನು ಎಂದಿಗಹುದೋ Next