Previous ಆಪತ್ತಿಗೊಳಗಾದೆನಮ್ಮಯ್ಯ ತ್ರಿಭುವನ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು Next

ಏನೇನೆಂಬೆ ಎನ್ನೊಗೆತನವ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ |ಪಲ್ಲವಿ|

ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ |೧|

ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ |೨|

ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು |೩|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಆಪತ್ತಿಗೊಳಗಾದೆನಮ್ಮಯ್ಯ ತ್ರಿಭುವನ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು Next