Previous ಹೋದೆನೂರಿಗೆ ಇದ್ದೆ ನಾನಲ್ಲಿ ಅಲ್ಲಿರ್ಪ ಸಂಗಯ್ಯ ಇಲ್ಲಿಲ್ಲವೆ! Next

ಎಂಜಲೆಂಜಲೆನ್ನದೆ ನೀನು...

ರಚನೆ: ಶ್ರೀಗುರುಮಾತೆ ನೀಲಮ್ಮತಾಯಿ (ನಿಲಾಂಬಿಕೆ)


ಎಂಜಲೆಂಜಲೆನ್ನದೆ ನೀನು ಮನವೆ ಕೇಳು
ಎಂಜಲಾವುದೆಂದರಿಯದೆ || ಪ ||

ಕರ್ಮ ಸಂಕಲ್ಪ ತಾ ಶಾಸ್ತ್ರದೆಂಜಲು ಮನವೆ ಕೇಳು
ಸಂಕಲ್ಪ ತಾ ಶಾಸ್ತ್ರದೆಂಜಲು
ಶಾಸ್ತ್ರಕಾ ಜ್ಞಾತೃವಿನೆಂಜಲು ಮನವೆ ಕೇಳು
ಜ್ಞಾತೃ ಜ್ಞಾನದೆಂಜಲು || ೧ ||

ಪೃಥ್ವಿ ಎಂಬುದುದಕದೆಂಜಲು ಮನವೆ ಕೇಳು
ಉದಕ ತಾನಗ್ನಿ ಎಂಜಲು
ಅಗ್ನಿ ವಾಯುವಿನೆಂಜಲು ಮನವೆ ಕೇಳು
ವಾಯು ತಾನಾಕಾಶದೆಂಜಲು || ೨ ||

ಕಾಣ್ಬುದೆಲ್ಲ ನೇತ್ರದೆಂಜಲು ಮನವೆ ಕೇಳು
ಶಬ್ದವೆಲ್ಲ ಶೋತ್ರದೆಂಜಲು
ರಸವೆಲ್ಲ ಜಿಹ್ವೆ ಎಂಜಲು ಮನವೆ ಕೇಳು
ಗಂಧ ಪ್ರಾಣದೆಂಜಲು || ೩ ||

ಶಿಷ್ಯನೆಂಬುದು ಗುರುವಿನೆಂಜಲು ಮನವೆ ಕೇಳು
ಗುರು ತಾ ಲಿಂಗದೆಂಜಲು
ಲಿಂಗ ನಿರೂಪದೆಂಜಲು ಮನವೆ ಕೇಳು
ನಿರೂಪು ನಿರಾಳದೆಂಜಲು || ೪ ||

ಎಂಜಲೇಂ ಸೂತಕವನು ಕಳೆದು ಮನವೆ ಕೇಳು
ಪ್ರಸಾದವನು ಕೊಳಬಲ್ಲಡೆ
ಕುಂಜರನು ಬೆಳಲಪ್ಪಣ್ಣ ನುಂಗಿದತೆರದಿ ಮನವೆ ಕೇಳು
ಎಂಜಲೆಲ್ಲ ಘೋರ ಸಂಗಯ್ಯ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಹೋದೆನೂರಿಗೆ ಇದ್ದೆ ನಾನಲ್ಲಿ ಅಲ್ಲಿರ್ಪ ಸಂಗಯ್ಯ ಇಲ್ಲಿಲ್ಲವೆ! Next