Previous ಲಿಂಗವು ಇರಲು ಶಿವ ನರರಿಗೆಂತಹುದು Next

ಕರುಣಿ ಎಂತಹನು

ಭಾಮಿನಿಷಟ್ಪದಿ

ಕರುಣವಾರಿಧಿ ಶಿವನು ಎನುತಲಿ
ಅರಿದ ಮರುಳರ ಕವಿಗಳೆಂಬರು
ಬರಿಯ ತರಕಟ ಕಾಡುವಾತನು ಕರುಣಿ ಎಂತಹನು || ಪ ||

ಆದಿಮೈಯನು ಜೈನರುಗಳಾ
ವಾದಕೋಸುಗ ಕರೆಯ ಬರುತಿರೆ
ಹಾದಿಯೊಳಗಂ ಕಾಡಿದಾತನು ಅಂತುಮಲ್ಲದಲೆ
ಮಾದಿರಾಜನ ಅರಸಿ ಬರುತಿರೆ
ಭೇದಿಸದೆಯುರೆ ಕಾಡಿದಾತನು
ಮಾಧವೋದ್ಭವವೈರಿಯೀತನು ಕರುಣಿ ಎಂತಹನು || ೧ ||

ಭೂಮಿಯೊಳಗತಿಚೋದ್ಯ ಮೈದುನ
ರಾಮ ತಂದೆಯು ಕರೆಯಬರುತಿರೆ
ಆ ಮಹಾತ್ಮನ ಕಾಡಿದಾತನು ಅಂತುಮಲ್ಲದಲೆ
ಪ್ರೇಮ ತನ್ನೊಳಗಿರ್ದ ನೃಪಸತಿ
ಕಾಮದೇವನ ಬಳಿಯ ನಂಬಿಯ
ನಾಮವನು ನೆನೆವುತಲಿ ಕಾಡಿದ ಕರುಣಿ ಎಂತಹನು || ೨ ||

ಕ್ಷಿತಿಗೆ ಮೆರೆವಾ ಕಾಂಚಿಪುರದಲಿ
ಪತಿವ್ರತಾಮಣಿ ಚಂಗಳವ್ವನ
ಸುತನ ಕೊಲಿಸಿದ ಮರುಕವಿಲ್ಲದೆ ಅಂತುಮಲ್ಲದಲೆ
ಸುತನ ನೋರ್ವನ ಪಿಡಿದು ಬಡತನ
ಯುತದಿ ಬಾಳುವ ನಂಬಿಯಕ್ಕನ
ಕೃತಕದಿಂದಲಿ ಮಗನ ಕೊಲಿಸಿದ ಕರುಣಿ ಎಂತಹನು || ೩ ||

ಕೋಲುರೊಳಗೆಲ್ಲವರ ತೆರದಿಂ
ಹಾಲ ಸವಿಸಲು ತಂದ ಮುಗ್ಧಾ
ಬಾಲೆಯನು ತರಕಟವ ಕಾಡಿದನಂತುವಲ್ಲದತಿ
ನೀಲಕಂಠಯ್ಯಗಳು ಆಣೆಗೆ
ಬಾಲೆಯೊಳು ಮಾತಾಡದಿರುತಿರೆ
ಬಾಳವಾಗಿಯೆ ಕಾಡಿದಾತನು ಕರುಣಿ ಎಂತಹನು || ೪ ||

ಮಡದಿ ಪುರುಷರು ನುಡಿಯದಿರ್ದೊಡೆ
ಜಡಿದು ಜರಿದರೆ ಕೋಪಮಪ್ಪುದೆ
ಕಡೆಗೆ ಪುರುಷರಿಗದರ ಹೋಲುವೆಯಂತೆ ನಾನಿನ್ನ
ಬಿಡದೆ ಬಣ್ಣಿಸಿ ಪಾಡುತಿರೆ ಎ
ನ್ನೊಡನೆ ನುಡಿಯದೆ ಇರಲು ಜರಿದೆನು
ಮೃಡ ಷಡಕ್ಷರವರನೆ ಕೋಪವು ಬೇಡ ಎನ್ನೊಡನೆ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಲಿಂಗವು ಇರಲು ಶಿವ ನರರಿಗೆಂತಹುದು Next