Previous ಎನ್ನ ಕರೆಯ ಬನ್ನಿ ಎನ್ನ ಕರದೊಳಗಿರ್ದು ಏಕೆ ನುಡಿಯೆ? Next

ನಿಮ್ಮನು ನೆನೆವ ಮನವ ಬಯಸುವೆನು

ಕುಸುಮಷಟ್ಪದಿ

ಎನಗೆ ನಿಮ್ಮನೆ ನೆನೆವ
ಮನವನೇ ಬಯಸುವೆನು
ಘನವ ನಾನಿದರಿಂದ ಮೇಲರಿಯೆನು || ಪ ||

ನಿಮ್ಮ ನೆನೆವುದೆ ಹರುಷ
ನಿಮ್ಮ ನೆನೆವುದೆ ಪರುಷ
ನಿಮ್ಮ ನೆನೆವುದ ಕಾಮಧೇನುವೆನಗೆ
ನಿಮ್ಮ ನೆನೆವುದೆ ಗತಿಯು
ನಿಮ್ಮ ನೆನೆವುದೆ ಮತಿಯು
ನಿಮ್ಮ ನೆನೆವುದೆ ಇಹದ ಪರದ ಸುಖವು || ೧ |

ನಿಮ್ಮ ನೆನೆವುದೆ ತಪವು
ನಿಮ್ಮ ನೆನೆವುದೆ ಜಪವು
ನಿಮ್ಮ ನೆನೆವುದೆ ಸಕಲ ಪರತತ್ತ್ವವು
ನಿಮ್ಮ ನೆನೆವುದೆ ನಿತ್ಯ
ನಿಮ್ಮ ನೆನೆವುದೆ ಸತ್ಯ
ನಿಮ್ಮ ನೆನೆವುದ ವ್ಯಕ್ತ ಕೈಲಾಸವು || ೨ ||

ತನು ದಂಡನೆಯ ಮಾಡಿ
ಜಿನುಗಲೇತಕೆ ಮರುಳೆ
ಘನಗಿರಿಯ ಮೇಲೆ ತಪವಿರಲೇತಕೆ
ಮನಸಿಜಾರಿಯ ನಿನ್ನ
ನೆನಹು ಮನದೊಳು ನೆಲಸೆ
ಘನವಾದ ಕೈಲಾಸ ತನ್ನೊಳಿಹುದು || ೩ ||

ಹಲವು ತೀರ್ಥಕ್ಷೇತ್ರ
ಹಲವು ಗಿರಿಗಹ್ವರವು
ತೊಳಲಿ ಬಳಲುತ್ತಿರುವುದೇಕೆ ಮನವೆ
ಮಲಹರನ ನೆನಹು ತಾ
ನೆಲಸಿರಲು ಮನದೊಳಗೆ
ಹಲವನರಸುವದೇನು ತಾನೆ ಶಿವನು || ೪ ||

ಸುರಲೋಕವೇನೆನಗೆ
ನರಲೋಕವೇನೆನಗೆ
ಉರಗಮಯಲೋಕ ತಾನಾದಡೇನು
ಗುರುಷಡಕ್ಷರಿವರನ
ಪರಮಮಂತ್ರದ ನೆನಹು
ದೂರಕೊಳಲು ಶಿವಲೋಕ ತಾನಿರ್ಪುದು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಎನ್ನ ಕರೆಯ ಬನ್ನಿ ಎನ್ನ ಕರದೊಳಗಿರ್ದು ಏಕೆ ನುಡಿಯೆ? Next