Previous ಒಡಲು ಹಿಡಿದ ಜಡನು ನಾನು ಏತರ ಭಯವೆಮಗೆ Next

ಎಂದಿಗೆ ದೊರಕುವುದು

ಪರಿವರ್ಧಿನಿಷಟ್ಪದಿ

ಎಂದಿಗೆ ದೊರಕುವದನವರತಭವನ
ನಂದದಿ ಪೂಜಿಪ ಪರಸೌಖ್ಯವು ತಾ
ಸಂದು ಸುಖಾರ್ಣವ ತೆರೆಯೊಳಗಿಪುದು ಎಂದಿಗೆ ದೊರಕುವದು || ಪ ||

ಕಾಡುವ ಮಾಯೆಯ ಜಾಡಿಸಿ ಭವವ ವಿ
ಭಾಡಿಸಿ ಕಾಲನನೇಡಿಸಿ ಕಾಮನ
ನೋಡಿಸಿ ಮರವೆಯ ಕಾಡಿಗೆ ವಕ್ಕಿಯ ಪರಿವೇಷ್ಟಿಸಿ ಬಳಿಕ
ನೋಡುತ ಲಿಂಗವ ಮೂಡುತ ಗದ್ಗದ
ಪಾಡುತ ಸುಖಜಲವಾಡುತ ನೇತ್ರದಿ
ಬೇಡುತ ಭಕ್ತಿಯ ಕೂಡುವ ಶಿವಸುಖವೆಂದಿಗೆ ದೊರಕುವದು || ೧ |

ಕೆರೆ ತೊರೆ ಮಡು ಡೊಣೆ ಪರಿವಾ ನಿರ್ಝರ
ಗಿರಿ ಗುಹೆ ವನಲತೆ ಪರ್ಬಿದ ಕಾನನ
ಸರರುಹ ಕೊಳದೊಳು ಧುಮುಕುವ ನದಿತಟದೊಳು ಶಶಿಶಿಲೆಯೊಳಗೆ
ಅರೆಯೊಳು ಪುಳಿನಸ್ಥಳದೊಳು ನಿರ್ಮಳ
ಪರಮಸುಖಸ್ಥಳದೊಳು ಘನಲಿಂಗಕೆ
ಹರುಷದಿ ಪೂಜೆಯ ಮಾಡುವ ಶಿವಸುಖವೆಂದಿಗೆ ದೊರಕುವದು || ೨ ||

ಶಶಿಕಾಂತದ ಶಿಲೆಯಿಂದಲಿ ರಚಿಸಿದ
ಮಿಸುಪಾ ಕೊಳದೊಳು ಚಂದ್ರನ ಕಿರಣದ
ಪಸರದ ಜಲದೊಳು ಕುಂಕುಮ ಚಂದನ ಕರ್ಪುರಮಂ ಕದಡಿ
ಬಿಸರುಹ ದಳದಿಂದರ್ಘಮ ನೀಡುವ
ಬಿಸರುಹಗಳೊಳುಂ ಮೂರ್ತವ ಮಾಡಿಸಿ
ಶಶಿಕಳೆಧರನಂ ಪೂಜಿಪ ಶಿವಸುಖವೆಂದಿಗೆ ದೊರಕುವದು || ೩ ||

ಒಪ್ಪುವ ಲಿಂಗದ ಮೊಗದೊಳು ಮೊಗಮಿ
ಟ್ಟೊಪ್ಪುತ ಗಲ್ಲದೆ ಬೆಮರುವ ಜಲದಿಂ
ದೊಪ್ಪನೆ ನೆನೆವುತ ನಟ್ಟಾಲಿಗಳಂ ಚಲಿಸದೆ ದೃಢದಿಂದ
ಒಪ್ಪುವ ನಿಟ್ಟಿರೋ ಲಿಂಗವನಾವಗ
ತಪ್ಪದೆ ಚಿತ್ರಿಸಿ ಬರೆದರೊಯೆಂಬು
ತಿಪ್ಪಾ ಪರವಶನಂದದ ನಿಜಸುಖವೆಂದಿಗೆ ದೊರಕುವದು || ೪ ||

ಕಮಲಪರಾಗದ ಪೀಠವನಿಕ್ಕಿಸಿ
ಕಮಲದ ಸತ್ತಿಗೆಗಳ ಬಳಸುತ ತ
ತ್ಕಮಲದ ಪತ್ರದ ಬೀಸಣಿಗೆಗಳನ್ನು ಬೀಸುತ ಹರುಷದಲಿ
ಕಮಲದ ಕರ್ಣಿಕದರ್ಪಣದಿಂದಲಿ
ಕುಮುದದ ಘಂಟೆಯ ನುಡಿಸುತ ಪೂಜಿಪ
ವಿಮಲಷಡಕ್ಷರ ಲಿಂಗದ ನಿಜಸುಖವೆಂದಿಗೆ ದೊರಕುವುದು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಒಡಲು ಹಿಡಿದ ಜಡನು ನಾನು ಏತರ ಭಯವೆಮಗೆ Next