ರಚನೆ: ಶ್ರೀ ಮುಪ್ಪಿನ ಷಡಕ್ಷರಿ
ಏನಿಸನೋದಿ ಫಲವದೇನು
ಎನಿಸಕೇಳಿ ಫಲವದೇನು
ಮನಸು ತನ್ನ ದುರ್ಗುಣಗಳ ಬಿಡದು ಶಿವಶಿವ || ಪ ||
ಇಂದುಧರನ ಚರಣದಲ್ಲಿ
ಹೊಂದಿ ಸುಖದೊಳಿರದು ಮನವು
ಕುಂದದನ್ನ ವಿಷಯದತ್ತ ಹರಿವುದೆಂತೆನೆ
ಒಂದು ಶುನಿಯ ಹಿಡಿದುತಂದು
ಅಂದಣವನು ಏರಿಸಿರಲು
ಮುಂದೆ ಅಡಗ ಕಂಡು ನೆಗೆದ ಮಾಳೆಯಾಯಿತು || ೧ ||
ಸೊಗಸಿ ಶಿವನ ಮಂತ್ರವನ್ನು
ನೆಗಳುವದಕೆ ಎನ್ನ ಜಿಹ್ವೆ
ಸೊಗಡಿಸುವದು ಕಾಳುನುಡಿಗೆಯಲಸದೆಂತೆನೆ
ಹಗಲು ಇರುಳು ತನ್ನ ಬಾಯಿ
ಸಿಗುವುದರಿಯದಂತೆ ನಾಯಿ
ಜಗುಳುವುದಕೆಯಲಸದಂತೆ ಜಿಹೈಯಲಸದು || ೨ ||
ಮಂಗಳಾತ್ಮ ಷಡಕ್ಷರಿಯ
ಲಿಂಗದಡಿಯ ಪೂಜಿಸುವಡೆ
ಕೊಂಗಿ ಮನವು ಸ್ವಸ್ಥಿರವನು ಐದದೆಂತೆನೆ
ಹಿಂಗದೊಲಿದು ಗಂಧಪ್ರಣುಗು
ಸಂಗಡಿಸುತ ತೊಡೆಯೆ ಹಂದಿ
ಹಾಂಗೆಯಿರದೆ ಗಂಜಳಕ್ಕೆ ಓಡುವಂದದಿ || ೩ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”