ರಚನೆ: ಶ್ರೀಗುರು ನಿಜಗುಣಯೋಗಿಗಳು
ಹೂವಿಲ್ಲದ ಕಂಪು ಹೊನ್ನಿಲ್ಲದ ಬಣ್ಣ
ಕಳೆಯಿಲ್ಲದ ಚಂದ್ರನ ಪರಿಯಂತೆ
ಪರಮ ಶಿವಯೋಗ ನೋಡಾ || ಪ ||
ಕಾಲಿಲ್ಲದ ನಡೆ ಕಣ್ಣಿಲ್ಲದ ನೋಟ
ಹಾಲಿಲ್ಲದ ತುಪ್ಪದ ಪರಿಯ ನೋಡಾ
ನಾಲಿಗೆಯಿಲ್ಲದ ರುಚಿ ಕಿವಿಯಲ್ಲಿ
ಕೇಳದೆ ಹೇಳುವ ಪರಶಿವಯೋಗಾ || ೧ ||
ಹರಳಿಲ್ಲದ ಗೆಜ್ಜೆ ಹುರುಳಿಲ್ಲದ ಹಯನು
ಕಬ್ಬುನವುಂಡ ನೀರಿನ ಪರಿಯ ನೋಡಾ
ಹುರಿದು ಬಿತ್ತಿದ ಬೀಜದ ನಾಟಿಯ
ಪರಿಯಂತೆ ಪರಶಿವಯೋಗಾ || ೨ ||
ತನುಗುಣಂಗಳರಿಯದ ಸಮಾಧಿ
ಮನವಳಿದು ನೆರೆವ ಸುಖ ನಿಮ್ಮಾ
ನೆರೆಯಲರಿದು ನಿಜಗುಣಯೋಗಾ
ಅನುಪಮ ಸುಖಿ ಸಿದ್ದರಾಮೇಶ ತಂದೆ || ೩ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”