Previous ಯಾಕೆ ಮಗನೆ ಬಸವ ಬಸವ ಬಸವಯೆಂದು.. Next

ಬಸವಾಕ್ಷರವನೆಲ್ಲ ವಶನಾಗಿ

ರಚನೆ: ಶ್ರೀಗುರು ಬಸವಾರ್ಯರು


ಬಸವಾಕ್ಷರವನೆಲ್ಲ ವಶನಾಗಿ ನೆನೆದು ನೀ
ಅಸಮಾಕ್ಷನೊಳು ಬೆರೆದು ಹಾಡಿರಣ್ಣ || ಪ ||

ಆವಾಗ ಬಸವನೆಂದಾವಾಗ ನೆನೆವವರ
ಭಾವದೊಳು ನೆಲೆಸಿತೀ ಬಸವಾಕ್ಷರ
ಆವಾಗ ಬಸವ ಬಸವಾಯೆಂದು ಹಾಡುವರ
ಕಾವುತೀರ್ಪುದು ತಾನೆ ಬಸವಾಕ್ಷರ || ೧ ||

ಬಸವ ಬಸವಾಯೆಂದು ಅಸಮ ಶರಣರನೆಲ್ಲವ
ವಶಮಾಡಿಕೊಂಡಿಹುದು ಬಸವಾಕ್ಷರ
ಬಸವವೆಂದವರೆಲ್ಲ ಅಸು ಲಿಂಗದಲ್ಲಿ ಬೆರೆದು
ವಶನಾಗಿ ತೋರಿತೀ ಬಸವಾಕ್ಷರ || ೨ ||

ನೆನೆದು ನೋಡಿರೆ ಒಮ್ಮೆ ಬಸವಾಕ್ಷರವ ನೀವು
ಅನುಪಮನ ಮಾಡುವದು ಬಸವಾಕ್ಷರ
ಅನುವರಿದು ಬಸವ ಬಸವ ಎಂದಡೆ ತನ್ನ
ಮನಸಿಜನ ಸುಡುವದೀ ಬಸವಾಕ್ಷರಾ || ೩ ||

ಏನ ಮಾಡಿದಡೇನ ಮಾನಸದಿ ನೆನೆದೊಮ್ಮೆ
ಧ್ಯಾನಿಸುತ ನೆನೆಯಿರೈ ಬಸವಾಕ್ಷರ
ಸ್ವಾನುಭಾವದಿ ಶಿವನ ಭಜಿಸಿದಡೆಯು
ಮಾನಸದಿ ಜಪಿಸಿರೈ ಬಸವಾಕ್ಷರ || ೪ ||

ಪರಮಶಿವನೊಲುಮೆಯನ್ನು ಬೆರೆಸಿ ಬೇಕಾದಡೆಯು
ಪರಮನೆ ತಾನಾಗಿಹುದು ಬಸವಾಕ್ಷರ
ಪರಮ ಪರಮನೆ ನಿತ್ಯ ಗುರುಬಸವನೆಂದೆನುತ
ಪರಕಿಸುತ ನೋಡಿರೈ ಬಸವಾಕ್ಷರ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಯಾಕೆ ಮಗನೆ ಬಸವ ಬಸವ ಬಸವಯೆಂದು.. Next