Previous ನಿನ್ನ ನೀನೆ ತಿಳಿದು ನೋಡು ನನ್ನ ಮೇಲೆ ಹಗೆಯೇಕೆ Next

ನಿಮ್ಮ ಹಾಗೆ ಕಾಂಬೆನಯ್ಯ

ಭೋಗಷಟ್ಪದಿ

ದೇವ ನಿಮ್ಮ ರೂಪಿನವರು
ಆವ ಪರಿಯ ನಟಿಸುತಿರಲು
ದೇವ ನಿಮ್ಮ ಹಾಗೆ ಕಾಂಬೆನನ್ಯಗಾಣೆನು || ಪ ||

ಚರನದೊರ್ವ ಪರರ ಸತಿಯ
ಕರೆದು ತಂದು ತನ್ನ ಮುಂದೆ
ನೆರೆಯುತಿರಲು ಜರಿದು ಅವರನನ್ಯಭಾವದಿ
ಮರಳಿ ಕಂಡ ನಾದಡೆನ್ನ
ಕೊರೆದು ಮೂಗನಿಟ್ಟಿಗೆಯಲಿ
ಒರಸಿ ಕನ್ನಡಿಯನು ತೋರಿ ನಗಿಸು ಜಗದೊಳು || ೧ ||

ಅಳುಕದೊರ್ವ ಚರನು ಕನ್ನ
ಗಳವು ತಂದು ಎನ್ನ ಮುಂದೆ
ಇಳುಹಿಕೊಂಡು ಇರಲು ಅವರನನ್ಯಭಾವದಿ
ತಿಳಿವೆನಾದೊಡೆನ್ನ ಹಿಡಿದು
ಘಳಿಲನನ್ನ ನಾಲಿಗೆಯನು
ಉಳಿಯದಂತೆ ಕೊರೆದು ಬಿಸುಟಿ ನಗಿಸು ಜಗದೊಳು || ೨ ||

ಹರನ ರೂಪು ಧರಿಸಿಯೋರ್ವ
ನೆರೆಯುತಿರಲು ಹೊಲತಿಯನ್ನು
ಅರಿತು ಅವರನನ್ಯಭಾವದಿಂದ ಕಂಡೊಡೆ
ಹರನೆ ನೀನೆ ಹಿಡಿದು ಎನ್ನ
ಕರಗಿ ಕಾದಸೀಸವನ್ನು
ಎರೆದು ಬಾಯೊಳಿರದ ಸುಣ್ಣಗದಡು ತುಂಬಿಸು || ೩ ||

ಕಳ್ಳರಾಗಲವರು ಬಹಳ
ಸುಳ್ಳರಾಗಲವರು ವಿಷಯ
ದಲ್ಲಿ ಪ್ರೀತರಾಗಿ ತಿರುಗುತಿರಲಿ ಧರೆಯೊಳು
ಒಳ್ಳಿತಪ್ಪ ಶಿವನ ರೂಪ
ದಲ್ಲಿ ಇರಲು ಅವರ ನಾನು
ಖುಲ್ಲ ತನದಿ ಜರಿದೆನಾದೊಡೆನ್ನ ಶಿಕ್ಷಿಸು || ೪ ||

ಒಡೆಯ ನಮಗೆ ಏಕೆ ನಾಡ
ಗೊಡವೆ ನಿಮ್ಮ ರೂಪು ಇರಲು
ಒಡೆಯನೆಂದು ನಮಿಸಿ ಶುದ್ಧರಾಗೊದಲ್ಲದೆ
ಮೃಡ ಷಡಕ್ಷರಾಂಕ ನಿಮ್ಮ
ಬೆಡಗು ತಿಳಿಯಬಾರದಾಗಿ
ಒಡೆಯರುಗಳ ನಂತು ಇಂತು ಎನ್ನಬಾರದು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ನಿನ್ನ ನೀನೆ ತಿಳಿದು ನೋಡು ನನ್ನ ಮೇಲೆ ಹಗೆಯೇಕೆ Next