Previous ಬಸವ ನಿಮ್ಮಯ ಪ್ರಣಮವ ಬಸವಾಕ್ಷರವನೆಲ್ಲ ವಶನಾಗಿ Next

ಯಾಕೆ ಮಗನೆ ಬಸವ

ರಚನೆ: ಶ್ರೀಗುರು ಬಸವಾರ್ಯರು


ಯಾಕೆ ಮಗನೆ ಬಸವನಾಕಾರವರಿಯದೆ
ಕಾಕು ಗೋಷ್ಠಿಯೊಳಿರ್ದು ಶೋಕಿಸಬ್ಯಾಡಾ ||ಪಲ್ಲವಿ||

ನಡೆವಾಗ ಬಸವ ನುಡಿವಾಗ ಬಸವ
ಎಡದೆರಹಿಲ್ಲದೆ ಬಸವ ಎಂದೆನ್ನು
ಪಾಡುತ ಬಸವ ಎಂದಾಡುತ ಮನದಲ್ಲಿ
ಪಾಡುತ ಬಸವ ಎಂದೊದಗು ಮನವೆ || ೧ ||

ಬಸವ ಬಸವ ಎಂದು ಬಸವ ಬಸವ ಎನ್ನು
ದಶದ್ವಯ ಪ್ರಣಮದಿ ಈಶಾಡು ಮನವೆ
ಬಸವ ಬಸವ ಎಂದು ಕಸವ ಕಳೆದು ಮನ
ದಶಮೇಕ ಶೇಷಡಿ ವಶವಾಗು ಮನವೆ || ೨ ||

ಒಂದೊಂದು ನಿಮಿಷದಿ ಕುಂದದೆ ನೀನೀಗ
ಚಂದದಿ ಬಸವ ಬಸವ ಎನ್ನು ಮನವೆ
ಬಂದ ಬಳಿಕ ನೀನು ಬಸವನ ನೆನೆಯದೆ
ಮುಂದಕ್ಕೆ ಕಲ್ಲಾಗಿ ಹುಟ್ಟದೆ ಮನವೆ || ೩ ||

ಮುಂದಣ ಇರುವೆಯ ನೋಡಿ ತಲೆಯ ಮ್ಯಾಲೆ ಆ
ನಂದದಕ್ಷರತ್ರಯವನೋದು ನೀ ಮನವೆ
ಮುಂದಣ ಮೇಲಣ ತ್ರಿಕೂಟದಲ್ಲಿ ನೀನಿಂದು
ಅಂದವಾದಕ್ಷರ ಮೇಲುಂಟು ನೋಡು || ೪ ||

ಗಿರಿಗಿರಿ ಕಮಲವ ಸರದಲ್ಲಿ ಹಿಡಕೊಂಡು
ಇರವ ನಿಃಕಲದಲ್ಲಿ ಬೆರೆದು ಬಸವನ
ಪರಿಪೂರ್ಣ ನಿಕಲ ತಾನು ತಾನಾದನಾ
ವರಗುರುಬಸವನ ನೆನೆ ಕಂಡ್ಯಾ ಮನವೆ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಬಸವ ನಿಮ್ಮಯ ಪ್ರಣಮವ ಬಸವಾಕ್ಷರವನೆಲ್ಲ ವಶನಾಗಿ Next