ಕುಸುಮಷಟ್ಪದಿ
ಶಿವ ಶರಣರಾ ಮನೆಯ
ತವೆಸೇವೆಯನು ಮಾಡಿ
ಭವವ ಗೆದ್ದನು ಎನಗೆ ಸರಿಯದಾರು || ಪ ||
ಬಸವೇಶ್ವರನು ಚನ್ನ
ಬಸವೇಶ್ವರನು ಕರುಣಿ
ದಸರಯ್ಯ ಮೋಳಿಗೆಯ ಮಾರಯ್ಯನ
ಮಸಣಯ್ಯಗಳ ಮನೆಯ
ಕಸವ ಗುಡಿಸುವ ಮಹಾ
ಹೊಸಸೇವಕರು ನಮಗೆ ಸರಿಯದಾರು || ೧ |
ಚೆನ್ನಯ್ಯನಗ್ಗಣಿಯ
ಹೊನ್ನಯ್ಯ ಗಾಣದಾ
ಕನ್ನಯ್ಯ ಧೂಳಿದೇವರು ಬೇಡರ
ಕಣ್ಣಯ್ಯಗಳ ಮನೆ
ಉನ್ನತದ ಸೇವಕರು
ಇನ್ನು ಧರೆಯೊಳು ನಮಗೆ ಸರಿಯದಾರು || ೨ ||
ಹರಳ್ಳಯ್ಯ ಮಧುವಯ್ಯ
ಬಳ್ಳೇಶಮಲ್ಲಯ್ಯ
ಗೊಲ್ಲಾಳದೇವ ಹಾವಿನಹಾಳಿನ
ಕಲ್ಲಯ್ಯಗಳ ಮನೆಯ
ಹುಲ್ಲು ಸೊಪ್ಪನೆ ತರುವ
ಬಲ್ಲಿದರು ನಮಗಿನ್ನು ಸರಿಯದಾರು || ೩ ||
ಬಾವೂರು ಬೊಮ್ಮಯ್ಯ
ದೇವರಾ ದಾಸಯ್ಯ
ಭಾವಿಗಳು ಜಗದೇವ ಮೊಲ್ಲೆ ಬೊಮ್ಮ
ಆವಾವ ಜಗದೊಳಗೆ
ಆ ವಂದ್ಯರಾ ಮನೆಯ
ಸೇವಕರು ನಮಗಿನ್ನು ಸರಿಯದಾರು || ೪ ||
ಚಿಕ್ಕಯ್ಯ ಡೋಹರಾ
ಕಕ್ಕಯ್ಯ ಸೊಡ್ಡಳಾ
ಯಕ್ಕಿಯಾ ಮಾರಯ್ಯ ರಾಮಯ್ಯನು
ಚಕ್ಕುಲಿಗೆ ನಾಗಯ್ಯ
ಅಕ್ಕರಿನ ತೊತ್ತಿನಾ
ಮಕ್ಕಳಪ್ಪವು ನಮಗೆ ಸರಿಯದಾರು || ೫ ||
ಹಾದರದ ಬೊಮ್ಮಯ್ಯ
ಮಾದಾರ ಧೂಳಯ್ಯ
ಮೇದಾರ ಕೇತಯ್ಯ ವಹಿಲಯ್ಯನ
ಆದಯ್ಯಗಳ ಮನೆಯ
ಕಾದುಕೊಂಡಿರುವಂಥ
ಆದಿಕರು ನಮಗಿನ್ನು ಸರಿಯದಾರು || ೬ ||
ಸಾಮವೇದಿಯ ಸಿದ್ಧ
ರಾಮಯ್ಯ ಮಯದುನಾ
ರಾಮಯ್ಯ ಏಕಾಂತರಾಮಯ್ಯನ
ಭೀಮಯ್ಯಗಳ ಮನೆಯ
ಆ ಮಹಾಸೇವಕರು
ಈ ಮಹಿಯೊಳೆಮ ಗಿನ್ನು ಸರಿಯದಾರು || ೭ ||
ಮೊರನದಾ ವೆಮ್ಮಯ್ಯ
ಮೊರಟದಾ ಬಂಕಯ್ಯ
ತಿರುನೀಲಕಂಠಯ್ಯನಣುಮೂರ್ತಿಯು
ಗುರುಮಲ್ಲಿಕಾರ್ಜುನರ
ವರಪಂಡಿತರ ಮನೆಯ
ತುರುಗಾಹಿಗರು ನಮಗೆ ಸರಿಯದಾರು || ೮ ||
ಬಂಕಯ್ಯ ಶಿವರಾತ್ರಿ
ಸಂಕಯ್ಯ ಹೊಡೆಹುಲ್ಲ
ಬಂಕಯ್ಯ ಮರುಳುವೇಷದೊಳೊಪ್ಪುವ
ಶಂಕರೇಶ್ವರನ ವರ
ಕಿಂಕರರ ಕಿಂಕರರ
ಲೆಂಕರಪ್ಪವು ನಮಗೆ ಸರಿಯದಾರು || ೯ ||
ಕುಂಬಾರ ಗುಂಡಯ್ಯ
ಅಂಬಿಗರ ಚೌಡಯ್ಯ
ಕೆಂಭಾವಿ ಭೋಗಯ್ಯ ಶ್ವಪಚಯ್ಯನ
ಮುಂಬಾಗಿಲನು ಕಾಯ್ದ
ನಂಬಿಗೆಯ ಸೇವಕರು
ಕುಂಭಿನಿಯೊಳೆಮಗಿನ್ನು ಸರಿಯದಾರು || ೧೦ ||
ಮಳೆಯ ರಾಜನು ಚೋಳ
ವಲಘಾಂಡ ನೈನಾರು
ಕಲಿನಾಥನಾ ಚಾರಮಾ ನಂಬಿಯರ
ಕಳೆವೆತ್ತ ಚಂಗಳೆಯ
ಒಳಬಾಗಿಲನು ಕಾಯ್ವ
ಸಲುಗೆವಾಳರು ನಮಗೆ ಸರಿಯದಾರು || ೧೧ ||
ಸಿರಿಯಾಳ ಕಲಿಯಾರ
ಗುರುಭಕ್ತ ನವನಂದಿ
ಅರಿಯಮನುವಾಳು ನಮಿತಾಂಡಾರ್ಯರ
ಮೆರೆಮಿಂಡದೇವರಾ
ಚರಣ ರಕ್ಷೆಯ ಪಿಡಿದು
ವರವ ಪಡೆವರು ನಮಗೆ ಸರಿಯದಾರು || ೧೨ ||
ಚೋಳಕ್ಕ ದುಗ್ಗಳೆಯು
ನೀಲಲೋಚನೆ ಚೆಲ್ವ
ಸೂಳೆ ನಂಬಿಯು ಕಮಳೆ ಸೋಮವ್ವೆಯಾ
ಕಾಳು ಜೈನನ ಬಿಟ್ಟ
ಲೋಲ ವೈಜವ್ವೆಯಾ
ಆಳುಗಳು ನಮಗಿನ್ನು ಸರಿಯದಾರು || ೧೩ ||
ಅಕ್ಕನಾಗಮ್ಮನ ಸ
ತ್ಯಕ್ಕ ಚಂಗಳ ಚೆಲ್ವೆ
ಅಕ್ಕರೆಯ ಮಹದೇವಿ ಸುಗ್ಗವ್ವಯಾ
ಚಿಕ್ಕಕೊಡಗೂಸಿನವ
ರಕ್ಕರಿನ ತೊತ್ತಿನಾ
ಮಕ್ಕಳಪ್ಪವು ನಮಗೆ ಸರಿಯದಾರು || ೧೪ ||
ಇಂತಪ್ಪವರ ಬಂಟ
ನಿಂತು ಭವದಲಿ ಬಂದ
ನಂತೆಯೆಂದರೆ ನಿಮಗೆ ಕೊರತೆಯಯ್ಯ
ಮುಂತೆ ನಮ್ಮವನೆಂದು
ಸಂತೋಷದಿಂದಪ್ಪು
ಕಂತುಹರ ಶಿವಷಡಕ್ಷರಿಲಿಂಗವೆ || ೧೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ