Previous ದಯಾಮಯ ಗುರು... ಕೆಟ್ಟ ಮನಸೀಗೆಷ್ಟು ಹೇಳಲು Next

ಶರಣ ಸೇವೆ

ರಚನೆ: ಶ್ರೀ ಅಥಣಿ ಮುರುಘೇಂದ್ರ ಶಿವಯೋಗಿಗಳು


ಮಡಿವಾಳ ತಂದೆಗಳ ಬಟ್ಟೆಗಳ ನಾನೊಗೆವೆ
ಹಡಪದಪ್ಪಣ್ಣಗಳ ಕ್ಷೌರವನು ನಾ ಮಾಳ್ಪೆ

ಡೋಹರ ಕಕ್ಕಯ್ಯಂಗೆ ತೊಗಲ ಹದ ಮಾಡಿಡುವೆ
ವೀರ ಹರಳೇಶನಿಗೆ ಜೋಡನ್ನು ಮಾಡಿಡುವೆ

ಮಾರಯ್ಯ ತಂದೆಗಳ ಕಟ್ಟಿಗೆಯ ನಾ ಹೊರುವೆ
ಧೀರ ಕೇತಯ್ಯಗಳ ಬುಟ್ಟಿಯನು ನಾ ಮಾಳ್ಪೆ

ಆಮುಗಿ ಸಿದ್ದೇಶ್ವರಗೆ ಕಂಬಳಿಯ ನಾ ನೆಯ್ವೆ
ನಮಿಸಿ ಮರುಳೇಶನಿಗೆ ಪಾಕವನು ನಾ ಮಾಳ್ಪೆ

ಶಿವದಾಸಿಮಯ್ಯಗಳ ಬಟ್ಟೆಯನು ನಾನೆಯ್ವೆ
ತನೆ ಶಂಕರಯ್ಯಗಳ ಕಪಿನಿಯನು ನಾ ಹೊಲಿವೆ

ನುಲಿಯ ಚಂದಯ್ಯಗಳ ಹಗ್ಗ ಕಣ್ಣಿಯ ಮಾಳ್ಪೆ
ಸಲೆ ಮಾದಾರ ಚನ್ನನಿಗೆ ಅಂಬಲಿಯ ಮಾಡಿಡುವೆ

ಕುಂಬಾರ ಗುಂಡಯ್ಯಗೆ ಮಡಕೆಯನು ನಾ ಮಾಳ್ಪೆ
ಸಂಭ್ರಮದಿ ಪ್ರಭುವಿಂಗೆ ಮದ್ದಳೆಯ ಬಾರಿಸುವೆ

ಆವಾವ ಕಾಯಕವ ಮಾಡಿದರು ಬಸವೇಶ
ಆವಗಂ ಶರಣರನು ಸೇವಿಪೆನು ಬಸವೇಶ

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ದಯಾಮಯ ಗುರು... ಕೆಟ್ಟ ಮನಸೀಗೆಷ್ಟು ಹೇಳಲು Next