ಕುಸುಮಷಟ್ಪದಿ
ಮಗಳೆ ಎನ್ನಯ ಮಾತು
ಮಿಗೆ ಕೇಳು ನಿನ್ನಾಳ್ದ ಪ
ನಗರಾಜ ವಿಷವ ತಾಳನು ಕೊರಳೊಳು || ಪ ||
ಎಲ್ಲರಂತವನಲ್ಲ
ಬಲ್ಲಿದನು ನಿನ್ನ ಮನ
ದೊಲ್ಲಭನು ಅಂಗವಿದ್ಯೆಗಳೆಲ್ಲವ
ಸಲ್ಲಿಸುತ್ತೊಳಗೊಳಗೆ
ಮೆಲ್ಲಗೆಡೆಯಾಡುತಿರು
ನಿಲ್ಲದಿರು ಹೊರಗೆ ರಚ್ಚೆಯ ಬಳಸದೆ || ೧ |
ಇನನುದಯ ಕಾಲಕ್ಕೆ
ಮನೆಯ ಕಸವನು ತೆಗೆದು
ಅಣಿಮಾಡು ಕರಣತಂಡುಲವ ತಳಿಸು
ಮನೆಯೊಳಗೆ ಕತ್ತಲೆಯ
ಇನಿತನೆಸಗಲು ಬೇಡ
ಮುನಿದಡವ ರಕ್ಕಸನು ನಿನ್ನಾಳ್ದನು || ೨ ||
ನೀ ಮುಗ್ಧ ನಿನ್ನಾಳ
ಕಾಮಾರಿ ಆತ್ಮ ಗಿಳಿ
ರಾಮನನು ಓದಿಸೌ ಹೊರಗಾಡದೆ
ನಾ ಮುನ್ನಲಂಜುವನು
ನೀ ಮಾತುಗಳ ಕೇಳು
ಸೋಮಧರ ಕೋಪಿಸಿದಡೆಲ್ಲಡಗುವೆ || ೩ ||
ಕಾಲ ಪಿಡಿವೊಡೆ ಅವಗೆ
ಕಾಲಿಲ್ಲ ಮೇಲ್ವಾಯ್ದು
ಬಾಲೆ ನೀ ಹಿಡಿವಡವಗೊಡಲು ಇಲ್ಲ
ಎಳ್ಳನಿತು ಬೇಸರವ
ತಾಳುವವನಲ್ಲ ಕಟು
ಶೂಲಿ ಮುನಿದಡೆ ತಿಳುಪಲರಿಯೆ ಮಗಳೆ || ೪ ||
ಮತಿ ಮಸುಳದಿರು ಮಗಳೆ
ಪತಿ ಕೋಪಿಸುವನು ಪತಿ
ವ್ರತೆಯರೊಳು ಗೆಳೆತನವ ಮಾಡು ನೀನು
ಪತಿ ಕಾಮಜಿತ ನೀನು
ಅತಿಕಾಮಿಯಾತನನು
ಸತಿ ಕೇಳು ನೀನಿಂತು ಅಗಲಬೇಡ || ೫ ||
ಕಡುತವಕಿ ನಿನ್ನ ಪತಿ
ಬಿಡು ಬೇಸರಾಡದಿರು
ಒಡಗೂಡು ದಿವರಾತ್ರಿಗಳು ಎನ್ನದೆ
ತಡಮಾಡದಿರು ಮಗಳೆ
ಒಡನೆ ಮುನಿದರೆ ಬಳಿಕ
ಮಡದಿ ನೀನೆಂತವನ ತಿಳುಪಿ ನೆರೆವೆ || ೬ ||
ಮನೆಯೊಳಗೆ ಹಚ್ಚಿಯುರಿ-
ಯನೆ ಪಟುವನೆ ಮಾಡು
ಅನಿತರೊಳಗಾಗಿ ನಿನ್ನಾಳಗೊಲಿದು
ಮನಶುದ್ಧದಲಿ ಮಾಡು
ಘನಭಕ್ತಿಬೋನವನು
ಇನಿಯನಿಂಗೆಡೆಮಾಡು ಅದಕೊಲಿವನು || ೭ ||
ಮೂರು ಕೋಣೆಗಳೊಳಗೆ
ಮೂರು ಜ್ಯೋತಿಯ ಬೆಳಗು
ಆರೈದು ಮಧ್ಯ ಕೋಣೆಯ ಮನೆಯೊಳು
ಮಾರಾರಿಯನು ನೀನ
ಪಾರ ಸುಖದೊಳು ಹೊಂದಿ
ನಾರಿ ನೀನಿರು ಇಹವ ಪರವರಿಯದೆ || ೮ ||
ಇಂತು ಪತಿಯೊಳಗೊಂದಿ
ಸಂತತಂ ಇರುತಿರಲು
ಕಂತುಹರ ಶಿವಷಡಕ್ಷರಿಲಿಂಗವು
ಮುಂತೆ ನಿನ್ನುವನು ತ
ನ್ನಂತೆ ಮಾಡುವನೊಲಿದು
ಕಾಂತೆ ನೀನಂಬಿ ನಚ್ಚಿರು ಬೆದರದೆ || ೯ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ