ಭೋಗಷಟ್ಪದಿ
ಧರೆಯೊಳುಳ್ಳ ತನುವ ಧರಿಸಿ
ಗಿರಿಯು ಶರಧಿ ಸರಸಿಜಾಂಡ
ವರಿಯೆ ದೊಡ್ಡಿ ತಾದಸ ಎನಗೆ ದೊಡ್ಡಿತೆ || ಪ ||
ಮೊಟ್ಟೆಯನ್ನು ಹೊತ್ತ ನರನು
ತಿಟ್ಟನಿಳಿಯಲಾರದಂತೆ
ಸೃಷ್ಟಿಯೊಳಗೆಯುದಿಸಿ ನಾನು ಕಷ್ಟತನುವನು
ತೊಟ್ಟ ದೆಸೆಗಳಿಂದ ಧರೆಯ
ಘಟ್ಟಬೆಟ್ಟ ಗಿರಿಗಳೆಲ್ಲ
ಶ್ರೇಷ್ಠವಾದವೈಸೆ ಮಳಲಗುಪ್ಪೆಯೆನಗಿವು || ೧ |
ಕೋಳದೊಳಗೆ ಸಿಲುಕಿದವನು
ಕಾಲ ನಗಹಿ ನೆಗೆವುದಕ್ಕೆ
ಮೇಲಕೈದದಂಥ ತನುವನಾಂತಕಾರಣ
ಏಳು ವಾರಿಧಿಗಳು ತನಗೆ
ಕಾಲಿನಲ್ಲಿ ಮಳಲೊಳೆಳೆದ
ಕಾಲುವೆಗಳ ಹಾಗೆ ಎನಗೆ ದೊಡ್ಡಿ ತಪ್ಪುದೆ || ೨ ||
ಕೀರ ಪಂಜರದೊಳು ಸಿಲುಕಿ
ಹಾರಲಾರದಂತೆ ಎನಗೆ
ವಾರಿಜೋದ್ಭವಾಂಡವೆಲ್ಲ ದೊಡ್ಡ ತಪ್ಪುದೆ
ಮಾರವೈರಿ ಷಡಕ್ಷರಿಯು
ಮೀರಿ ಎನಗೆ ಮುನಿದು ದೊಡ್ಡ
ಘೋರತನುವ ತೊಡಿಸಿ ತಾನು ಕೊಟ್ಟ ಕಾರಣ || ೩ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ