ಕುಸುಮಷಟ್ಪದಿ
ಭವಕಾಟಕಾರದಲೆ
ಶಿವಶರಣರ ಮನೆಯ
ತವೆ ದ್ವಾರದೂಳು ಬಿದ್ದೆನುಳುಹಿರಯ್ಯ || ಪ ||
ಹೇಸಿ ಮಾನವ ನಾನು
ಭಾಷೆವಂತನು ಅಲ್ಲ
ಈಶನೊಳು ಸಲುಗೆ ಎಂತಪ್ಪುದಯ್ಯಾ?
ಘಾಸಿಯಾದೆನು ಭವದಿ
ಓಸರಿಸದೇ ಎನ್ನ
ಈಶನಂಫ್ರಿಗೆ ಒಲಿದು ಸಲಿಸಿರಯ್ಯಾ || ೧ |
ಉದ್ಧರಿಸುವರ ಕಾಣೆ
ಇದ್ದಸೆಯ ಕೆಡಿಸಿದೆನು
ಹೊದ್ದು ವೆನು ಇನ್ನಾವ ದೆಸೆಯ ನಾನು
ಬಿದ್ದೆ ನಿಮ್ಮಂಗಳದಿ
ಉದ್ದರಿಸಿಯಲ್ಲದೊಡೆ
ಒದ್ದು ಕಡೆಗೆನ್ನನ್ನು ನೂಕಿರಯ್ಯಾ || ೨ ||
ನೀತಿಯರಿಯದೆ ನಾನು
ಪಾತಕದ ನಡೆಯಲ್ಲಿ
ಭೂತಳದೊಳಂ ನಡೆದ ಗತಿಯಾವುದು
ಓತು ಕರುಣಿಸಿ ನೀವು
ಪಾತಕಾಭ್ರಕ್ಕೆ ಜಂಝ
ವಾತರೆಂಬುದ ಕೇಳಿ ಬಂದೆನಯ್ಯಾ? || ೩ ||
ತಪ್ಪ ನೋಡದೆ ಎನ್ನ
ಒಪ್ಪವಿಟ್ಟು, ನಡೆಸಿ
ತಿಪ್ಪೆಯನು ಬಗೆದಲ್ಲಿ ಏನಿಪ್ಪುದು
ಸರ್ಪಧರ ನಿಮಗಂಜಿ
ಇಪ್ಪನಾಗಿಯು ನಿಮಗೆ
ಅಪ್ಪದಪ್ಪದದೊಂದು ಉಂಟೆ ಹೇಳಿ || ೪ ||
ಎಲ್ಲಾ ಪುರಾತನರು
ಎಲ್ಲಿ ನೆನೆದಲ್ಲಿ ಎ-
ನ್ನಲ್ಲಿ ಇಪ್ಪುದ ನಾನು ಬಲ್ಲೆನಾಗಿ
ಇಲ್ಲಿ ನತನಾಗಿ ನಾ-
ನಿಲ್ಲಿ ಕೃಪೆಯನು ಪಡೆವೆ
ಸಲ್ಲಲಿತ ಶಿವಷಡಕ್ಷರಿಲಿಂಗವೆ || ೫ ||
ರಚನೆ:- ಶ್ರೀ ಮುಪ್ಪಿನ ಷಡಕ್ಷರಿ