Previous ಕೋಪವೆನಗೆ ಲೋಪವಾಗದು ಪನ್ನಗೇಂದ್ರಭರಣ Next

ಹಿರಿದು ಕಿರಿದು ಇಲ್ಲ

ಭೋಗಷಟ್ಪದಿ

ಲಿಂಗದಲ್ಲಿ ಮನವ ಬೆರಸಿ
ದಂಗೆ ಕಿರಿದು ಹಿರಿದು ಇಲ್ಲ
ಅಂಗಗುಣವನಳಿದು ನಿಜವನರಿದ ಕಾರಣ || ಪ ||

ಅಂಬಕಳವು ಅಮೃತದನ್ನ
ಕಂಬಳಿಗಳು ಕನಕದುಪಟಿ
ಅಂಬುಧಿಗಳು ಕಾಲುವೆಗಳು ಸಮವದಾತಗೆ
ನಂಬಿ ಲಿಂಗದಲ್ಲಿ ಮನವು
ತುಂಬಿ ಹೊರಗೆ ಮರೆದನಾಗಿ
ಕುಂಭಿಣಿಯೊಳು ಹಿರಿದು ಕಿರಿದು ತೋರದಾತಗೆ || ೧ ||

ಕನಕದುಪ್ಪರಿಗೆಯು ತಿಪ್ಪೆ
ಕನಕಶೈಲ ಹುಲ್ಲು ಮರಡಿ
ಮಿನುಗುತಿಪ್ಪ ರನ್ನ ಕಲ್ಲು ಸಮವದಾತಗೆ
ಘನಕ ಘನವದಾದ ಲಿಂಗ
ಮನವ ನುಂಗಿಕೊಂಡಿತಾಗಿ
ಇನಿತು ಹಿರಿದು ಕಿರಿದು ಕಾಣಬಾರದಾತೆಗೆ || ೨ ||

ಅರಳಮಂಚ ಸರಳಹಾಸು
ವರ ಸುಗಂಧ ಪುಡಿಯು ಧೂಳಿ
ಹಿರಿಯ ಕನಕದುಡಿಯದಾರ‍ ನೂಲು ಸಮವದು
ಪರಕೆ ಪರವದಾದ ಲಿಂಗ
ಶರಧಿಯಲ್ಲಿ ಮುಳುಗಿ ಬಳಿಕ
ಹೊರಗೆ ಮೆರೆದನಾಗಿ ಹಿರಿದು ಕಿರಿದು ತೋರದು || ೩ ||

ಹಿರಿಯರಿವರು ಕಿರಿಯರಿವರು
ಅರಿಗಳಿವರು ಮಿತ್ರರಿವರು
ಅರಸರಿವರು ಭಂಟರಿವರು ಎಂದು ತೋರದು
ಕರಣ ಹರಣವೆಲ್ಲ ಲಿಂಗ
ಕಿರಣವಾಗಿ ಹೊರಗೆ ಮರೆದು
ಇರುವ ಶರಣ ಹಿರಿದು ಕಿರಿದು ಕಾಣಬಾರದು || ೪ ||

ಇದುವೆ ಸುಖವು ಇದುವೆ ದುಃಖ
ವಿದುವೆ ಮೃದುವು ಇದುವೆ ಕಠಿಣ
ವಿದುವೆ ಶೀತವಿದುವೆ ಉಷ್ಣವೆಂದು ತೋರದು
ಮುದದಿ ಷಡಕ್ಷರಿಯ ಲಿಂಗ
ಒದಗಿ ತಾನೆಯಾದನಾಗಿ
ಇದಿರಿನಲ್ಲಿ ಹಿರಿದು ಕಿರಿದು ಕಾಣಬಾರದು || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಕೋಪವೆನಗೆ ಲೋಪವಾಗದು ಪನ್ನಗೇಂದ್ರಭರಣ Next